ದೈನಂದಿನ ಜೀವನದಲ್ಲಿ ಊಟ ಮುಗಿಸಿದ ತಕ್ಷಣ ಬಿಂದಿಗೆಗಟ್ಟಲೆ ಅಥವಾ ತಣ್ಣನೆಯ ನೀರು ಕುಡಿಯುವ ಅಭ್ಯಾಸ ಹೆಚ್ಚಿನವರಲ್ಲಿದೆ. ಆದರೆ, ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹಾಗೂ ಆಯುರ್ವೇದ ವೈದ್ಯರು ಎಚ್ಚರಿಸುತ್ತಾರೆ.
ನಾವು ಆಹಾರ ಸೇವಿಸಿದಾಗ ಅದನ್ನು ಜೀರ್ಣಿಸಲು ಹೊಟ್ಟೆಯಲ್ಲಿ ಜಠರಾಗ್ನಿ ಅಥವಾ ಜೀರ್ಣರಸಗಳು ಉತ್ಪತ್ತಿಯಾಗುತ್ತವೆ. ಊಟವಾದ ತಕ್ಷಣ ನೀರು ಕುಡಿಯುವುದರಿಂದ ಈ ಜೀರ್ಣರಸಗಳು ತೆಳುವಾಗುತ್ತವೆ. ಇದರಿಂದಾಗಿ ಜೀರ್ಣಕ್ರಿಯೆಯ ವೇಗ ಕಡಿಮೆಯಾಗಿ, ಸೇವಿಸಿದ ಆಹಾರ ಸರಿಯಾಗಿ ಪಚನವಾಗುವುದಿಲ್ಲ. ಪರಿಣಾಮವಾಗಿ ಗ್ಯಾಸ್ಟ್ರಿಕ್, ಅಜೀರ್ಣ, ಹೊಟ್ಟೆ ಉರಿ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಜೀರ್ಣವಾಗದ ಆಹಾರವು ಹೊಟ್ಟೆಯಲ್ಲಿಯೇ ಉಳಿದು ಕೊಬ್ಬಾಗಿ ಮಾರ್ಪಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ತೂಕ ಹೆಚ್ಚಳಕ್ಕೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಳಿತಕ್ಕೆ ಕಾರಣವಾಗಬಹುದು. ಊಟದ ಜೊತೆಗೆ ತಣ್ಣೀರು ಅಥವಾ ಐಸ್ ವಾಟರ್ ಕುಡಿಯುವುದಂತೂ ಜೀರ್ಣಕ್ರಿಯೆಗೆ ಇನ್ನಷ್ಟು ತೊಂದರೆ ಉಂಟುಮಾಡುತ್ತದೆ.
ಆರೋಗ್ಯಕರ ಜೀರ್ಣಕ್ರಿಯೆಗಾಗಿ ಊಟ ಮಾಡುವ ಅರ್ಧ ಗಂಟೆ ಮುಂಚೆ ಅಥವಾ ಊಟ ಮುಗಿದು 45 ನಿಮಿಷದಿಂದ ಒಂಡು ಗಂಟೆಯ ನಂತರ ನೀರು ಕುಡಿಯುವುದು ಸೂಕ್ತ. ಊಟದ ಸಮಯದಲ್ಲಿ ಗಂಟಲು ಒಣಗಿದಂತಿದ್ದರೆ ಒಂದೆರಡು ಸಿಪ್ ಉಗುರುಬೆಚ್ಚಗಿನ ನೀರನ್ನು ಮಾತ್ರ ಸೇವಿಸಬಹುದು. ಈ ಸಣ್ಣ ಬದಲಾವಣೆಯನ್ನು ಮಾಡಿಕೊಳ್ಳುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಬಹುದು.

