ಬೆಂಗಳೂರು- ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 13ರಿಂದ ಆರಂಭವಾಗಿ ಆಗಸ್ಟ್ 27ರವರೆಗೆ ನಡೆಯಲಿರುವ ಈ ಅಧಿವೇಶನವು, ಆಡಳಿತರೂಢ ಕಾಂಗ್ರೆಸ್ ಸರ್ಕಾರ ಹಾಗೂ ಎನ್ಡಿಎ (ಬಿಜೆಪಿ-ಜೆಡಿಎಸ್) ಮೈತ್ರಿಕೂಟದ ನಡುವಿನ ನೇರಾ ನೇರ ಸಮರಕ್ಕೆ ಸಾಕ್ಷಿಯಾಗುವ ಎಲ್ಲಾ ಮುನ್ಸೂಚನೆಗಳನ್ನು ನೀಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಇದು ಅತ್ಯಂತ ನಿರ್ಣಾಯಕ ಹಾಗೂ ಮೊದಲ ಪೂರ್ಣ ಪ್ರಮಾಣದ ಅಧಿವೇಶನವಾಗಿರುವುದರಿಂದ, ಸರ್ಕಾರದ ಆಡಳಿತಾತ್ಮಕ ವೈಫಲ್ಯಗಳನ್ನು ಒಂದೊಂದಾಗಿ ಎಳೆದು ತಂದು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಭರ್ಜರಿ ರಣತಂತ್ರ ರೂಪಿಸಿವೆ.
ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಸರ್ಕಾರದ ವಿರುದ್ಧ ಸಮರ ಸಾರಲು ಹಲವು ಪ್ರಮುಖ ವಿಷಯಗಳನ್ನು ಕೈಗೆತ್ತಿಕೊಂಡಿವೆ:
ಕೆಪಿಎಸ್ಸಿ ನೇಮಕಾತಿ ಅಕ್ರಮ
400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಹಣಕ್ಕಾಗಿ ಉದ್ಯೋಗ ನೀಡಲಾಗಿದೆ ಎಂಬ ಗಂಭೀರ ಆರೋಪ ಹಾಗೂ ವೈರಲ್ ಆಗಿರುವ ಆಡಿಯೋ ವಿವಾದ ಸದನದಲ್ಲಿ ಬಿರುಗೌಳಿ ಎಬ್ಬಿಸುವ ಸಾಧ್ಯತೆಯಿದೆ. ಕೆಪಿಎಸ್ಸಿ ಅಧ್ಯಕ್ಷರ ಅಮಾನತು ಹಾಗೂ ಸಿಐಡಿ ತನಿಖೆ ನಡೆಯುತ್ತಿದ್ದರೂ, ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಿಪಕ್ಷಗಳು ಪಟ್ಟುಹಿಡಿಯಲಿವೆ.
ಬಿಡದಿ ಟೌನ್ಶಿಪ್ ವಿವಾದ
ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದರೂ, ಯೋಜನೆಯೇ ಬೇಡ ಎನ್ನುವ ರೈತರ ಆಕ್ರೋಶವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿವೆ.
ಬರ ನಿರ್ವಹಣೆ ಹಾಗೂ ಕೃಷಿ ಬಿಕ್ಕಟ್ಟು
ಮಳೆಯ ಕೊರತೆಯಿಂದ ಉಂಟಾಗಿರುವ ಬರಗಾಲದ ಪರಿಸ್ಥಿತಿ, ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಕೃತಕ ಅಭಾವ, ಹಾಗೂ ರೈತರ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು ಕೃಷಿ ಮತ್ತು ಕಂದಾಯ ಇಲಾಖೆಗಳ ವೈಫಲ್ಯವನ್ನು ಎತ್ತಿ ತೋರಿಸಲಿವೆ.
ಕಾವೇರಿ ಜಲವಿವಾದ:
ತಮಿಳುನಾಡಿಗೆ ನೀರು ಬಿಡುಗಡೆ ವಿಚಾರ ಹಾಗೂ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಹೂಡಿರುವ ಅರ್ಜಿಗಳ ಹಿನ್ನೆಲೆಯಲ್ಲಿ, ರಾಜ್ಯದ ಕುಡಿಯುವ ನೀರಿನ ಹಿತಾಸಕ್ತಿ ಕಾಪಾಡುವಲ್ಲಿ ಸರ್ಕಾರದ ನಿಲುವನ್ನು ವಿಪಕ್ಷಗಳು ಪ್ರಶ್ನಿಸಲಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ
ಬೆಂಗಳೂರು ಹಾಗೂ ಮಂಗಳೂರು ಸೇರಿದಂತೆ ರಾಜ್ಯದಲ್ಲಿ ನಡೆದ ಪ್ರಮುಖ ಕೊಲೆಗಳು, ಡ್ರಗ್ಸ್ ಮಾಫಿಯಾ ಮತ್ತು ಸೈಬರ್ ಅಪರಾಧಗಳ ಹೆಚ್ಚಳವನ್ನು ಗೃಹ ಇಲಾಖೆಯ ವೈಫಲ್ಯವೆಂದು ಬಿಂಬಿಸಲು ವಿಪಕ್ಷಗಳು ಸಜ್ಜಾಗಿವೆ.
ಅನುದಾನ ಹಂಚಿಕೆಯಲ್ಲಿ ತಾರತಮ್ಯ
ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾಹದ ಹೊಳೆ ಹರಿಸಲಾಗುತ್ತಿದ್ದು, ವಿಪಕ್ಷ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪದಡಿ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರು ಸದನದಲ್ಲಿ ಧ್ವನಿ ಎತ್ತಲಿದ್ದಾರೆ.
ಪಂಚ ಗ್ಯಾರಂಟಿಗಳ ಪರಿಷ್ಕರಣೆ ಗೊಂದಲ:
ಗೃಹ ಜ್ಯೋತಿ, ಗೃಹ ಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳ ಮಾನದಂಡಗಳನ್ನು ಪರಿಷ್ಕರಿಸಲು ಮುಂದಾಗಿರುವ ಸರ್ಕಾರದ ಕ್ರಮ ಜನಸಾಮಾನ್ಯರಿಗೆ ನೀಡಿದ ಮಾತಿಗೆ ತಪ್ಪಿದಂತೆ ಎಂದು ಬಿಂಬಿಸಲು ವಿಪಕ್ಷಗಳು ಈ ಅಸ್ತ್ರ ಬಳಸಿಕೊಳ್ಳಲಿವೆ.
ಸರ್ಕಾರದ ಒಳಗಿನ ಬಿಕ್ಕಟ್ಟುಗಳು ಹಾಗೂ ರಾಜಕೀಯ ಬೆಳವಣಿಗೆಗಳು
ಹೊರಗಿನ ವಿಪಕ್ಷಗಳ ಹೋರಾಟದ ಜೊತೆಗೆ, ಆಡಳಿತ ಪಕ್ಷದ ಒಳಗಿನ ಬೆಳವಣಿಗೆಗಳು ಸಹ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿವೆ.
ಬಸವರಾಜ ಹೊರಟ್ಟಿ ರಾಜೀನಾಮೆ
ಆಗಸ್ಟ್ 7ರಂದು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡಿರುವುದು ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಸಲೀಂ ಅಹ್ಮದ್ ಅವರನ್ನು ಆ ಸ್ಥಾನಕ್ಕೆ ತರುವ ರಾಜಕೀಯ ಲೆಕ್ಕಾಚಾರಗಳು ಸದನದಲ್ಲಿ ಚರ್ಚೆಗೆ ಗ್ರಾಸವಾಗಲಿವೆ.
ಖಾತೆ ಹಂಚಿಕೆ ವಿಳಂಬ ಹಾಗೂ ಅಸಮಾಧಾನ
ಸಚಿವ ಸಂಪುಟ ವಿಸ್ತರಣೆಯ ಬಳಿಕವೂ ಖಾತೆ ಹಂಚಿಕೆ ಕುರಿತ ಗೊಂದಲ ಮತ್ತು ಸಚಿವ ಸ್ಥಾನ ಸಿಗದ ಶಾಸಕರ ಅಸಮಾಧಾನವು ಸರ್ಕಾರದ ಆಂತರಿಕ ಬಿಕ್ಕಟ್ಟನ್ನು ಬಹಿರಂಗಪಡಿಸಿದೆ. ವಿಪಕ್ಷಗಳು ಈ ಆಂತರಿಕ ಕಲಹವನ್ನೇ ಬಂಡವಾಳ ಮಾಡಿಕೊಳ್ಳಲು ಕಾಯುತ್ತಿವೆ.
ಆಗಸ್ಟ್ 13ರಿಂದ ಆರಂಭವಾಗಲಿರುವ ಈ ಮುಂಗಾರು ಅಧಿವೇಶನವು ಕೇವಲ ಕಲಾಪಕ್ಕೆ ಮಾತ್ರ ಸೀಮಿತವಾಗದೆ, ಆಡಳಿತ ಪಕ್ಷದ ಆಡಳಿತ ಸಾಮರ್ಥ್ಯ ಹಾಗೂ ರಾಜಕೀಯ ಎದುರಾಳಿಗಳ ತಂತ್ರಗಾರಿಕೆಯ ಅಗ್ನಿಪರೀಕ್ಷೆಯಾಗಲಿದೆ. ಜನರ ಸಮಸ್ಯೆಗಳಿಗೆ ಸದನದಲ್ಲಿ ಯಾವ ರೀತಿಯ ಪರಿಹಾರ ಸಿಗಲಿದೆ ಎಂಬುದು ಇಡೀ ರಾಜ್ಯದ ಜನರ ಗಮನ ಸೆಳೆದಿದೆ.

