ನಗರಗಳಲ್ಲಿ ಸಾಕಷ್ಟು ಮಂದಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾರೆ. ಆದರೆ ಬಾಡಿಗೆ ಮನೆಯ ಹೊರಗೆ ಮಾಲೀಕರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತಿರುತ್ತಾರೆ. ಹೀಗೆ ಮಾಡುವುದು ಕಾನೂನುಬದ್ಧವೇ? ಮಾಲೀಕರಿಗೆ ಅಂತಹ ಹಕ್ಕು ಇದೆಯೇ ಎಂಬ ಚರ್ಚೆ ಆಗಾಗ ನಡೆಯುತ್ತಿರುತ್ತದೆ. ಹಾಗಾದರೆ ಈ ಬಗ್ಗೆ ಭಾರತೀಯ ಕಾನೂನುಗಳು ಏನು ಹೇಳುತ್ತವೆ? ಇಲ್ಲಿದೆ ಮಾಹಿತಿ..
ನಗರಗಳು ಹಾಗೂ ಪಟ್ಟಣಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಾಡಿಗೆ ಮನೆಗಳಲ್ಲಿ ಅಥವಾ ಫ್ಲ್ಯಾಟ್ಗಳನ್ನು ಖರೀದಿಸಿ ವಾಸಿಸುತ್ತಿದ್ದಾರೆ. ಆದರೆ ಕೆಲವು ವಿಚಾರಗಳಲ್ಲಿ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಆಗಾಗ ವಿವಾದಗಳು ನಡೆಯುತ್ತಿರುತ್ತವೆ. ಬಾಡಿಗೆ ಪಾವತಿ, ಸೆಕ್ಯುರಿಟಿ ಡೆಪಾಸಿಟ್ ಸೇರಿದಂತೆ ಹಲವು ವಿಷಯಗಳಲ್ಲಿ ಜಗಳಗಳು ನಡೆಯುತ್ತವೆ. ಇವುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯೂ ಒಂದು.
ನಗರಗಳು ಮತ್ತು ಪಟ್ಟಣಗಳಲ್ಲಿ ಭದ್ರತಾ ದೃಷ್ಟಿಯಿಂದ ಬಹುತೇಕ ಮನೆಗಳು ಹಾಗೂ ಅಪಾರ್ಟ್ಮೆಂಟ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ. ಆದರೆ ಬಾಡಿಗೆ ಮನೆಯ ಹೊರಗೆ ಅಥವಾ ಮನೆಯ ಮುಖ್ಯ ದ್ವಾರದ ಎದುರು ಮಾಲೀಕರು ಸಿಸಿಟಿವಿ ಕ್ಯಾಮೆರಾ ಅಳವಡಿಸುವ ವಿಚಾರದಲ್ಲಿ ಆಗಾಗ ವಿವಾದಗಳು ಉಂಟಾಗುತ್ತವೆ. ಮನೆ ಮಾಲೀಕರು ಹೀಗೆ ಮಾಡಬಹುದೇ? ಅವರಿಗೆ ಅಂತಹ ಹಕ್ಕು ಇದೆಯೇ? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಈ ಕುರಿತ ನಿಯಮಗಳನ್ನು ತಿಳಿದುಕೊಳ್ಳೋಣ.
ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬಹುದೇ?
ಭಾರತೀಯ ಕಾನೂನುಗಳ ಪ್ರಕಾರ, ಮನೆ ಮಾಲೀಕರು ತಮ್ಮ ಆಸ್ತಿಯ ಭದ್ರತೆ ಮತ್ತು ರಕ್ಷಣೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬಹುದು. ಆದರೆ ಕ್ಯಾಮೆರಾವನ್ನು ಯಾವ ಸ್ಥಳದಲ್ಲಿ ಅಳವಡಿಸಲಾಗುತ್ತಿದೆ ಎಂಬುದಕ್ಕೆ ಕೆಲವು ಮಿತಿಗಳಿವೆ.
ಮನೆಯ ಪ್ರವೇಶ ದ್ವಾರಗಳು ಹಾಗೂ ಸಾಮಾನ್ಯವಾಗಿ ಎಲ್ಲರೂ ಬಳಸುವ ಸ್ಥಳಗಳಲ್ಲಿ ಭದ್ರತಾ ಉದ್ದೇಶಕ್ಕಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಅವಕಾಶವಿದೆ. ಆದರೆ ಬಾಡಿಗೆದಾರರ ಖಾಸಗಿತನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಬಾರದು.ಗೌಪ್ಯತೆಯ ಹಕ್ಕು ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಇರುವ ಮೂಲಭೂತ ಹಕ್ಕಾಗಿದೆ. ಸಂವಿಧಾನದ ಆರ್ಟಿಕಲ್ 21 ಅಡಿಯಲ್ಲಿ ವ್ಯಕ್ತಿಯ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳನ್ನು ರಕ್ಷಿಸಲಾಗಿದೆ. ಹೀಗಾಗಿ ಮನೆ ಮಾಲೀಕರು ಬಾಡಿಗೆದಾರರ ಖಾಸಗಿತನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸಾಧ್ಯವಿಲ್ಲ.
ಕಾನೂನುಗಳು ಏನು ಹೇಳುತ್ತವೆ?
1882ರ ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 108(C) ಅಡಿಯಲ್ಲಿ ಬಾಡಿಗೆದಾರರಿಗೆ ಕೆಲವು ಹಕ್ಕುಗಳಿವೆ. ಮಾಲೀಕರ ಆಸ್ತಿಯಲ್ಲಿ ಬಾಡಿಗೆದಾರರು ಶಾಂತಿಯುತವಾಗಿ ವಾಸಿಸುವ ಹಕ್ಕನ್ನೂ ಈ ಕಾನೂನು ರಕ್ಷಿಸುತ್ತದೆ.ಇನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಸೆಕ್ಷನ್ 66E ಪ್ರಕಾರ, ಅನುಮತಿಯಿಲ್ಲದೆ ವ್ಯಕ್ತಿಯ ಖಾಸಗಿ ಪ್ರದೇಶ ಅಥವಾ ಖಾಸಗಿ ಅಂಗಗಳ ಚಿತ್ರಗಳನ್ನು ತೆಗೆದುಕೊಳ್ಳುವುದು, ವಿಡಿಯೋ ಚಿತ್ರೀಕರಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧವಾಗಬಹುದು. ಇಂತಹ ಪ್ರಕರಣಗಳಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹2 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ.
ಹೀಗಾಗಿ ಕೇವಲ ಆಸ್ತಿ ತಮ್ಮ ಹೆಸರಿನಲ್ಲಿದೆ ಎಂಬ ಕಾರಣಕ್ಕೆ ಮನೆ ಮಾಲೀಕರು ತಮಗೆ ಇಷ್ಟ ಬಂದ ರೀತಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸಾಧ್ಯವಿಲ್ಲ. ಬಾಡಿಗೆದಾರರ ಖಾಸಗಿತನ ಮತ್ತು ಹಕ್ಕುಗಳಿಗೂ ಕಾನೂನಿನಲ್ಲಿ ರಕ್ಷಣೆ ಇದೆ.ಒಂದು ವೇಳೆ ಸಿಸಿಟಿವಿ ಕ್ಯಾಮೆರಾದ ಅಳವಡಿಕೆಯಿಂದ ಬಾಡಿಗೆದಾರರ ಗೌಪ್ಯತೆಗೆ ಧಕ್ಕೆಯಾಗುತ್ತಿದೆ ಎಂದು ಅನಿಸಿದರೆ, ಬಾಡಿಗೆದಾರರು ಸೂಕ್ತ ಕಾನೂನು ಮಾರ್ಗದ ಮೂಲಕ ದೂರು ನೀಡಬಹುದು.
ಸೂಚನೆ: ಸಿಸಿಟಿವಿ ಅಳವಡಿಕೆ ಮತ್ತು ಗೌಪ್ಯತೆ ಕುರಿತ ಕಾನೂನು ಅನ್ವಯವು ಕ್ಯಾಮೆರಾದ ಸ್ಥಳ, ಅದರ ದೃಶ್ಯ ವ್ಯಾಪ್ತಿ ಮತ್ತು ದಾಖಲಿಸಲಾಗುತ್ತಿರುವ ವಿಷಯದ ಮೇಲೆ ಅವಲಂಬಿತವಾಗಿರಬಹುದು.

