ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಆಪರೇಷನ್ ಮುಕ್ತ ಹೆಸರಲ್ಲಿ ವೈಟ್ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕಳೆದ ಎರಡು ದಿನದ ಅವಧಿಯಲ್ಲಿ 105 ಮಂದಿ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವೈಟ್ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರ 58 ವಿಶೇಷ ತಂಡಗಳು 3000ಕ್ಕೂ ಹೆಚ್ಚು ಮಂದಿಯನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶನಿವಾರ 53 ಅಕ್ರಮ ಬಾಂಗ್ಲಾ ನಿವಾಸಿಗಳು ಪತ್ತೆಯಾಗಿದ್ದು, ಭಾನುವಾರ ಮತ್ತೆ 52 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ವೈಟ್ಫೀಲ್ಡ್ ವಿಭಾಗದಲ್ಲಿ 35 ವಿಶೇಷ ತಂಡಗಳು 1035 ಜನರ ತಪಾಸಣೆ ನಡೆಸಿ 62 ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿವೆ. ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ 23 ವಿಶೇಷ ತಂಡಗಳು 1909 ಜನರನ್ನು ತಪಾಸಣೆ ನಡೆಸಿ 43 ಅಕ್ರಮ ವಲಸಿಗರನ್ನು ಪತ್ತೆ ಮಾಡಿದ್ದು, ಎಲ್ಲರನ್ನೂ ವಶಕ್ಕೆ ಪಡೆದು ನೆಲಮಂಗಲದ ಸೊಂಡೆಕೊಪ್ಪ ಸಮೀಪದ ವಲಸಿಗರ ಕೇಂದ್ರಕ್ಕೆ ಕಳುಹಿಸಲಾಗಿದೆ. ವಲಸಿಗರ ಕೇಂದ್ರ ಭರ್ತಿಯಾದ ಕಾರಣ ಕೆಲವು ಸ್ವಯಂಸೇವಾ ಸಂಸ್ಥೆಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಠಾಣಾ ವ್ಯಾಪ್ತಿಯ ಶೆಡ್ ಗಳಲ್ಲಿ ತಪಾಸಣೆ ನಡೆಸಿ ಶಂಕಿತ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಮಾಡಲಾಗಿದೆ. 2944 ಮಂದಿಯ ವಿಚಾರಣೆ ನಡೆಸಿ ಒಟ್ಟು 105 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, FRRO ಗೆ ಮಾಹಿತಿ ನೀಡಲಾಗಿದೆ. ಅವರೊಂದಿಗೆ ಸಮಾಲೋಚನೆ ನಡೆಸಿ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಬಾಂಗ್ಲಾದೇಶದವರಿಗೆ ನೆರವು ನೀಡಿದ ವರ ವಿರುದ್ಧ ಕ್ರಮ ಜರುಗಿಸಲಾಗುವುದು.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ, ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

