ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಮಾನವ ಹಾಗೂ ಕಾಡುಪ್ರಾಣಿಗಾ ಸಂಘರ್ಷ ಮುಂದುವರೆದಿದೆ. ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಪೊನ್ನಾಚಿ ಅರಣ್ಯ ವಲಯದ ಹುಣಸೇಬಯಲು ಅರಣ್ಯ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಮಲೆಮಹದೇಶ್ವರ ಬೆಟ್ಟದ ಹುಲಿಗೂಡು ಗ್ರಾಮದ ಮಹದೇವಸ್ವಾಮಿ (48) ಮೃತಪಟ್ಟವರು. ಇವರು ಮಲೆಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಫಾರೆಸ್ಟ್ ವಾಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ರಾತ್ರಿ ಹುಣಸೇಬಯಲು ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಮಹದೇವಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಮಲೆಮಹದೇಶ್ವರ ಬೆಟ್ಟ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

