ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ವಿರುದ್ಧ ನಾಳೆ ಆಗಸ್ಟ್ 9ರಿಂದ ನಡೆಯಲಿರುವ ಜೆಡಿಎಸ್ ಪಾದಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಸಾಂಕೇತಿಕವಾಗಿ ಪಾಲ್ಗೊಳ್ಳಲಿದ್ದು, ಒಂದಾಗಿ ಹೋರಾಟ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ಬೆಳಗ್ಗೆ ನಡೆದ ಬಿಜೆಪಿ – ಜೆಡಿಎಸ್ ಸಮನ್ವಯ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಸಮನ್ವಯ ಸಭೆಯಲ್ಲಿ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೇರಿ ಉಭಯ ಪಕ್ಷಗಳು ನಾಯಕರು ಪಾಲ್ಗೊಂಡಿದ್ದರು.
ಸಭೆ ಬಳಿಕ ಮಾತನಾಡಿದ ಕುಮಾರಸ್ವಾಮಿ, ಆ.9 ಮತ್ತು 10ರಂದು ಮಾತ್ರ ಪಾದಯಾತ್ರೆ ನಡೆಯಲಿದೆ. ಎರಡು ದಿನ ಜೆಡಿಎಸ್ ಪಾದಯಾತ್ರೆ ನಡೆಸಲಿದೆ. ನಾಳೆ ನಡೆಯುವ ಪಾದಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ ಎಂದರು.
ಬಿಡದಿ ಟೌನ್ಶಿಪ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ಎರಡು ದಿನಗಳ ಕಾಲ ಬೈರಮಂಗಲದಿಂದ ಕೆಂಗೇರಿವರೆಗೆ ಪಾದಯಾತ್ರೆ ನಡೆಯಲಿದೆ. ಆ ಬಳಿಕ ಫ್ರೀಡಂ ಪಾರ್ಕ್ನಲ್ಲಿ ಸಮಾರೋಪ ಸಮಾವೇಶ ನಡೆಯಲಿದೆ. ಜೆಡಿಎಸ್ – ಬಿಜೆಪಿ ಜಂಟಿ ಸಮಾರೋಪ ಸಮಾವೇಶ ನಡೆಸಲಾಗುವುದು. ಆ.19 ಅಥವಾ 20ರಂದು ಸಮಾವೇಶ ನಡೆಯುವ ಸಾಧ್ಯತೆ ಇದೆ.
ಈಗಾಗಲೇ ಬಿಜೆಪಿ ನಾಯಕರು ರೈತರ ಪರ ಸಭೆಗಳನ್ನು ಮಾಡಿದ್ದಾರೆ. ಆರ್.ಅಶೋಕ್, ನಾನು, ನಾರಾಯಣಸ್ವಾಮಿ ಚರ್ಚೆ ಮಾಡಿದ್ದೇವೆ. ವಿಧಾನಸಭಾ ಕಲಾಪದಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಬರಗಾಲ, ರೈತರ ಸಮಸ್ಯೆ, ಇತ್ಯಾದಿ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಸಮನ್ವಯತೆ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಚರ್ಚೆ ಮಾಡಿದ್ದೇವೆ. ಸದನದಲ್ಲೂ ಬಿಡದಿ ವಿಚಾರ ಚರ್ಚೆ ಆಗಲೇಬೇಕು. ರೈತರ ಮಹಿಳೆಯರ ಹೋರಾಟವನ್ನು ಇಡೀ ರಾಜ್ಯ ನೋಡುತ್ತಿದೆ. ರೈತರು ಭೂಮಿ ಕೊಡಲು ತಯಾರಿಲ್ಲ. ಸಚಿವರಿಗೆ ಖಾತೆ ಹಂಚಿಕೆ ಆಗಿಲ್ಲ. ಕೇವಲ ಸಿಎಂ ಪದವಿ ವಿಚಾರಕ್ಕೆ ಮೂರು ವರ್ಷಗಳ ಕಾಲ ಕಳೆದರು. ಈಗ ಸಚಿವರ ಖಾತೆ ವಿಚಾರಕ್ಕೆ ಕಾಲ ಕಳೆಯುತ್ತಿದ್ದಾರೆ. ಆ ಪಕ್ಷದ ದಿವಾಳಿತನ ಇದು ಎಂದು ವಾಗ್ದಾಳಿ ನಡೆಸಿದರು.
ಬಿಡದಿ ಟೌನ್ಶಿಪ್ಗೆ ವಿರೋಧ ಇದೆ. ಎರಡೂ ಪಕ್ಷಗಳು ಹೋರಾಟ ಮಾಡುವ ತೀರ್ಮಾನ ಮಾಡಿದ್ದೇವೆ. ಬಿಜೆಪಿ – ಜೆಡಿಎಸ್ ನಡುವೆ ಸಮನ್ವಯ ಸಮಿತಿ ರಚನೆ ಮಾಡುತ್ತೇವೆ. ಎರಡು ದಿನಗಳಲ್ಲಿ ಯಾರು ಯಾರು ಇರಬೇಕು ಅಂತ ತೀರ್ಮಾನ ಮಾಡುತ್ತೇವೆ. ಬಿಡದಿ ಟೌನ್ಶಿಪ್ ವಿಚಾರದಲ್ಲಿ ಹಿಂದೆ ಕಾಂಗ್ರೆಸ್ನವರು ಏನು ಹೇಳಿದ್ದರು? ರೈತರು 500 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಭೂಮಿ ಕೊಡಲು ರೈತರಿಗೆ ಇಚ್ಚೆ ಇಲ್ಲ. ಬೆದರಿಕೆ, ಒತ್ತಡ ಹಾಕಿ ಭೂಮಿ ಪಡೆಯುತ್ತಿದ್ದಾರೆ. ಈ ವಿಚಾರ ಸದನದಲ್ಲಿ ಚರ್ಚೆ ಆಗಬೇಕು ಎಂದರು.
ವಿಧಾನಮಂಡಲ ಅಧಿವೇಶನದಲ್ಲಿ ಜನರ ಸಮಸ್ಯೆ ಕುರಿತು ಧ್ವನಿ ಎತ್ತಲು ನಿರ್ಧಾರ ಮಾಡಲಾಗಿದೆ. ತನಿಖೆ ಆಗುತ್ತಿರುವವರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಈ ಬಗ್ಗೆ ಚರ್ಚೆ ಮಾಡುತ್ತೇವೆ. ಬರದ ಬಗ್ಗೆ ಸರ್ಕಾರ ವಿಫಲವಾಗಿದೆ. ಎಲ್ಲವನ್ನೂ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

