ತೆಲಂಗಾಣ : ತೆಲಂಗಾಣ ಸರ್ಕಾರಿ ಇಲಾಖೆಗಳಲ್ಲಿ ಒಂದೇ ಆಧಾರ್ ಸಂಖ್ಯೆಯನ್ನು ಬಳಸಿ ಎರಡು ಕಡೆ ಸಂಬಳ ಪಡೆಯುತ್ತಿದ್ದ ‘ಡಬಲ್ ಸ್ಯಾಲರಿ’ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಕ್ರಮವಾಗಿ ಪಡೆದ ಸಂಪೂರ್ಣ ಸಂಬಳವನ್ನು ಬಡ್ಡಿ ಸಹಿತ ವಸೂಲಿ ಮಾಡುವುದರ ಜೊತೆಗೆ, ತಪ್ಪಿತಸ್ಥ ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಖ್ಯ ಕಾರ್ಯದರ್ಶಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಆರ್ಥಿಕ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಫ್ಎಂಐಎಸ್ (IFMIS) ಪೋರ್ಟಲ್ನಲ್ಲಿ ಹಂತ ಹಂತವಾಗಿ ನಡೆಸಲಾಗುತ್ತಿರುವ ಆಧಾರ್ ಹಾಗೂ ಉದ್ಯೋಗಿಗಳ ವಿವರಗಳ ಪರಿಶೀಲನೆ ವೇಳೆ ‘ಡಬಲ್ ಸ್ಯಾಲರಿ’ ಹಗರಣ ಬೆಳಕಿಗೆ ಬಂದಿದೆ. ಒಂದೇ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಕಚೇರಿಗಳಲ್ಲಿ ನಿಯಮಿತ, ಗ್ರಾಂಟ್-ಇನ್-ಏಯ್ಡ್ ಮತ್ತು ತಾತ್ಕಾಲಿಕ ಸಿಬ್ಬಂದಿ ಹೆಸರಿನಲ್ಲಿ ಹಲವರು ಎರಡು ಕಡೆ ಸಂಬಳ ಪಡೆಯುತ್ತಿರುವುದು ಆರ್ಥಿಕ ಇಲಾಖೆಯ ಗಮನಕ್ಕೆ ಬಂದಿದೆ.
ಗಮನಾರ್ಹವೆಂದರೆ, ಈ ಅಕ್ರಮಗಳಲ್ಲಿ ಭಾಗಿಯಾಗಿರುವವರು ಬಹುತೇಕ ನಿಯಮಿತ ಸರ್ಕಾರಿ ನೌಕರರಾಗಿದ್ದಾರೆ. ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಂಜಯ್ ಜಾಜೂ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸರ್ಕಾರಿ ಬೊಕ್ಕಸಕ್ಕೆ ನಷ್ಟ
ಒಂದೇ ಆಧಾರ್ ಸಂಖ್ಯೆಯ ಆಧಾರದ ಮೇಲೆ ಒಂದಕ್ಕಿಂತ ಹೆಚ್ಚು ಸರ್ಕಾರಿ ಇಲಾಖೆಗಳ ಮೂಲಕ ಸಂಬಳ ಅಥವಾ ಗೌರವಧನ ಪಡೆಯುವುದು ಗಂಭೀರ ಆರ್ಥಿಕ ಅಕ್ರಮ ಎಂದು ಸರ್ಕಾರ ಸ್ಪಷ್ಟಪಡಿಸಿದೆ.ಇದು ಸರ್ಕಾರಿ ದಾಖಲೆಗಳನ್ನು ವಂಚಿಸುವುದು, ದಾಖಲೆಗಳಲ್ಲಿ ತಿದ್ದುಪಡಿ ಅಥವಾ ನಕಲಿ ದಾಖಲೆ ಸೃಷ್ಟಿಸುವುದು ಹಾಗೂ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಳ್ಳುವಂತಹ ಅಪರಾಧಗಳಿಗೆ ಒಳಪಡುತ್ತದೆ ಎಂದು ತಿಳಿಸಿದೆ.
ಎಲ್ಲಾ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ತಕ್ಷಣ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ. ಆರ್ಥಿಕ ಇಲಾಖೆ ನೀಡಿರುವ ದಾಖಲೆಗಳ ಆಧಾರದ ಮೇಲೆ ವಂಚನಾತ್ಮಕವಾಗಿ ಎರಡು ಕಡೆ ಸಂಬಳ ಪಡೆದಿರುವ ನೌಕರರ ವಿರುದ್ಧ ಕೂಡಲೇ ತನಿಖೆ ನಡೆಸಬೇಕು ಎಂದು ಆದೇಶಿಸಲಾಗಿದೆ.
ತೆಲಂಗಾಣ ಸಿವಿಲ್ ಸರ್ವಿಸಸ್ ನಿಯಮಗಳು-1991ರ ಪ್ರಕಾರ ತಪ್ಪಿತಸ್ಥರ ವಿರುದ್ಧ ಪ್ರಮುಖ ಶಿಕ್ಷೆ (Major Penalty) ವಿಧಿಸುವ ರೀತಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಬಡ್ಡಿ ಸಹಿತ ಹಣ ವಸೂಲಿ, ಕ್ರಿಮಿನಲ್ ಕೇಸ್
ಅಕ್ರಮವಾಗಿ ಪಡೆದಿರುವ ಸಂಪೂರ್ಣ ಸಂಬಳದ ಮೊತ್ತವನ್ನು ಬಡ್ಡಿ ಸಹಿತ ವಸೂಲಿ ಮಾಡುವಂತೆ ಸರ್ಕಾರ ಆದೇಶಿಸಿದೆ.ವಂಚನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.ಡಬಲ್ ಸಂಬಳ ಪಡೆಯುವ ಅಕ್ರಮಕ್ಕೆ ಸಹಕರಿಸಿದ ಅಥವಾ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಇಲಾಖಾ ಮಟ್ಟದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.
ಈ ವಿಚಾರವನ್ನು ಅತ್ಯಂತ ತುರ್ತು ವಿಷಯವಾಗಿ ಪರಿಗಣಿಸಿ, ತನಿಖೆಯ ಪ್ರಗತಿ, ವಸೂಲಿ ಮಾಡಿರುವ ಹಣದ ಮೊತ್ತ, ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳು ಹಾಗೂ ಕೈಗೊಂಡಿರುವ ಇಲಾಖಾ ಕ್ರಮಗಳ ಸಂಪೂರ್ಣ ವಿವರಗಳೊಂದಿಗೆ 7 ದಿನಗಳೊಳಗೆ ಆರ್ಥಿಕ ಇಲಾಖೆಗೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.ಪಂಚಾಯತ್ ರಾಜ್, ಪುರಸಭೆ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಪೊಲೀಸ್, ಕಂದಾಯ, ಕೃಷಿ ಹಾಗೂ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಗಳು ತಕ್ಷಣವೇ ಈ ಆದೇಶಗಳನ್ನು ಜಾರಿಗೆ ತರಬೇಕು ಎಂದು ಮುಖ್ಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

