ಭಾರತೀಯ ವಾಯುಪಡೆಯ (IAF) ವಿಂಗ್ ಕಮಾಂಡರ್ವೊಬ್ಬರನ್ನು ಸೂಕ್ಷ್ಮ ರಕ್ಷಣಾ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳ ಹಿಂದೆ ಬಂಧನಕ್ಕೊಳಗಾದ ಅಧಿಕಾರಿಯ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ (Official Secrets Act) ಅಡಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ದೆಹಲಿ ಪೊಲೀಸ್ನ ಹಿರಿಯ ಅಧಿಕಾರಿಗಳ ಪ್ರಕಾರ, ಈ ಪ್ರಕರಣವು ಭಾರತದ ಕಾರ್ಯತಂತ್ರದ ಸೇನಾ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶ ಹೊಂದಿರುವ ದೊಡ್ಡ ಗೂಢಚರ್ಯೆ ಜಾಲದತ್ತ ಸುಳಿವು ನೀಡುತ್ತಿದೆ.
ಮೇ 31ರ ರಾತ್ರಿ ಬಂಧನ
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯಾಗಿರುವ ವಿಂಗ್ ಕಮಾಂಡರ್ರನ್ನು ಫೀಲ್ಡ್ ಯೂನಿಟ್ನಲ್ಲಿ ನಿಯೋಜಿಸಲಾಗಿತ್ತು. ಮೇ 31ರ ರಾತ್ರಿ ಅವರನ್ನು ಬಂಧಿಸಲಾಯಿತು. ಭಾರತೀಯ ವಾಯುಪಡೆಯ ಗುಪ್ತಚರ ವಿಭಾಗವು ಪ್ರಕರಣಕ್ಕೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿಯನ್ನು ದೆಹಲಿ ಪೊಲೀಸರಿಗೆ ನೀಡಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಹನಿಟ್ರ್ಯಾಪ್?
ತನಿಖೆಯ ಪ್ರಕಾರ, ವೈಯಕ್ತಿಕ ಜೀವನದಲ್ಲಿ ಕಷ್ಟದ ಹಂತದಲ್ಲಿದ್ದ ಅಧಿಕಾರಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯೊಬ್ಬರು ಸಂಪರ್ಕಿಸಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.ನಂತರ ಇಬ್ಬರ ನಡುವೆ ಚಾಟ್ ಮತ್ತು ವಿಡಿಯೋ ಕಾಲ್ಗಳ ಮೂಲಕ ಸಂವಹನ ಆರಂಭವಾಗಿತ್ತು. ಕ್ರಮೇಣ ಆ ಮಹಿಳೆ ಅಧಿಕಾರಿಯ ವಿಶ್ವಾಸ ಗಳಿಸಿದ್ದಾಳೆ ಎನ್ನಲಾಗಿದೆ.
ಬಳಿಕ ಸೇನಾ ಘಟಕಗಳ ಚಲನವಲನ, ಸೈನಿಕರ ನಿಯೋಜನೆ ಸೇರಿದಂತೆ ಹಲವು ಸೂಕ್ಷ್ಮ ಮಾಹಿತಿಗಳನ್ನು ಒದಗಿಸುವಂತೆ ಆಕೆ ಅಧಿಕಾರಿಯನ್ನು ಕೇಳಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಅಧಿಕಾರಿಯು ಫೋಟೋಗಳು, ವಿಡಿಯೋಗಳು ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಡಿಜಿಟಲ್ ಮಾಧ್ಯಮಗಳ ಮೂಲಕ ಆಕೆಗೆ ಕಳುಹಿಸಿದ್ದಾನೆ ಎನ್ನಲಾಗಿದೆ.
ಸಹೋದ್ಯೋಗಿಯ ಮೊಬೈಲ್ಗೆ ಸ್ಪೈವೇರ್ ಆ್ಯಪ್
ತನಿಖೆಯ ವೇಳೆ ಮತ್ತೊಂದು ಗಂಭೀರ ವಿಚಾರ ಬೆಳಕಿಗೆ ಬಂದಿದೆ. ಸಹೋದ್ಯೋಗಿಯ ಮೊಬೈಲ್ ಫೋನ್ನಲ್ಲಿ ನಿರ್ದಿಷ್ಟ ಆ್ಯಪ್ವೊಂದನ್ನು ಇನ್ಸ್ಟಾಲ್ ಮಾಡುವಂತೆ ಮಹಿಳೆ ಅಧಿಕಾರಿಗೆ ಸೂಚಿಸಿದ್ದಾಳೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಆ ಆ್ಯಪ್ ಸ್ಪೈವೇರ್ ಅಥವಾ ರಿಮೋಟ್-ಆಕ್ಸೆಸ್ ಮಾಲ್ವೇರ್ನಂತೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಇಂತಹ ಆ್ಯಪ್ಗಳನ್ನು ಮೊಬೈಲ್ನಲ್ಲಿರುವ ಡೇಟಾ ಕದಿಯಲು, ಸ್ಥಳವನ್ನು ಟ್ರ್ಯಾಕ್ ಮಾಡಲು ಅಥವಾ ಸಂಭಾಷಣೆಗಳನ್ನು ಕದ್ದಾಲಿಸಲು ಬಳಸಬಹುದಾಗಿದೆ.
ಪಾಕಿಸ್ತಾನ ಮೂಲದ ಹ್ಯಾಂಡ್ಲರ್ಗಳ ಕೈವಾಡ?
ಸಾಮಾಜಿಕ ಜಾಲತಾಣದ ಮೂಲಕ ಅಧಿಕಾರಿಯನ್ನು ಸಂಪರ್ಕಿಸಿದ್ದ ಮಹಿಳೆ, ಪಾಕಿಸ್ತಾನದಲ್ಲಿರುವ ಶಂಕಿತ ಹ್ಯಾಂಡ್ಲರ್ಗಳ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
ಅಧಿಕಾರಿಯು ಎಷ್ಟು ಪ್ರಮಾಣದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಮತ್ತು ಮಹಿಳೆಯ ನಡುವಿನ ಡಿಜಿಟಲ್ ಸಂವಹನದ ಸಂಪೂರ್ಣ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
IAF ಹೇಳಿದ್ದೇನು?
ಭಾರತೀಯ ವಾಯುಪಡೆಯ ಅಧಿಕಾರಿಗಳು CNN-News18ಗೆ ನೀಡಿದ ಮಾಹಿತಿಯ ಪ್ರಕಾರ, ಆರೋಪಿ ವಿಂಗ್ ಕಮಾಂಡರ್ ಈಗಾಗಲೇ ವಾಯುಪಡೆಯ ನಿಗಾದಲ್ಲಿದ್ದರು. ಅವರನ್ನು ಮೇಲ್ವಿಚಾರಣೆಯಲ್ಲಿಯೂ ಇರಿಸಲಾಗಿತ್ತು.ನಂತರ ವಾಯುಪಡೆಯಿಂದ ಪೊಲೀಸರಿಗೆ ದೂರು ನೀಡಲಾಗಿದ್ದು, ಅದರ ಆಧಾರದ ಮೇಲೆ ತನಿಖೆ ಆರಂಭಿಸಲಾಯಿತು.ಪ್ರಕರಣದ ತನಿಖೆ ಪ್ರಸ್ತುತ ಮುಂದುವರಿದಿದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

