ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್ವೊಂದು ಕೆಳಭಾಗದ ರಸ್ತೆಗೆ ಉರುಳಿಬಿದ್ದು, ಚಾಲಕ ಹಾಗೂ ನಿರ್ವಾಹಕ ಸೇರಿದಂತೆ ಕನಿಷ್ಠ 8 ಪ್ರಯಾಣಿಕರು ದುರಂತವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತೂ 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೈರಾಗಢದಿಂದ ಚಂಬಾ ನಗರಕ್ಕೆ ತೆರಳುತ್ತಿದ್ದ ಶರ್ಮಾ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಖಾಸಗಿ ಬಸ್, ಬೆಳಿಗ್ಗೆ 6:30 ರ ಸುಮಾರಿಗೆ ಪ್ರಯಾಣ ಆರಂಭಿಸಿತ್ತು. ಬೈರಾಗಢದಿಂದ ಹೊರಟ ಕೇವಲ ಮೂರು ಕಿಲೋಮೀಟರ್ ಅಂತರದಲ್ಲೇ, ದೇವಿಕೋಠಿ ಸಮೀಪದ ಚಲುಜ್ ಮಂಜುಮುಸುಕಿನ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕೆಳಗಿದ್ದ ರಸ್ತೆಗೆ ಬಿದ್ದಿದೆ. ಅತಿವೇಗವೇ ಈ ರಸ್ತೆ ಅಪಘಾತಕ್ಕೆ ಮುಖ್ಯ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
https://x.com/ians_india/status/2085937768123740534
ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಯಿಂದ ಕೆಳಗೆ ಉರುಳಿ, ಕೆಳಭಾಗದಲ್ಲಿ ಸಾಗುತ್ತಿದ್ದ ಮತ್ತೊಂದು ರಸ್ತೆಯ ಮೇಲೆ ಬಿದ್ದಿದೆ. ಅಪಘಾತ ಸಂಭವಿಸಿದ ವೇಳೆ ಬಸ್ನಲ್ಲಿ ಸುಮಾರು 15ರಿಂದ 16 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಸ್ಥಳೀಯರಿಂದ ರಕ್ಷಣಾ ಕಾರ್ಯ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಬಸ್ನ ಅವಶೇಷಗಳಡಿ ಸಿಲುಕಿದ್ದ ಗಾಯಾಳುಗಳನ್ನು ಗ್ರಾಮಸ್ಥರು ಹೊರತೆಗೆದು, ತಕ್ಷಣವೇ ಪ್ರಾಥಮಿಕ ಚಿಕಿತ್ಸೆಗಾಗಿ ತೀಸಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು.
ಗಾಯಾಳುಗಳಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕ:
ಅಪಘಾತದಲ್ಲಿ ಇದುವರೆಗೆ 7 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, 11 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರಲ್ಲಿ ಆರು ಮಂದಿಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಂಬಾದ ಪಂಡಿತ್ ಜವಾಹರಲಾಲ್ ನೆಹರೂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ಮತ್ತು ಗಾಯಾಳುಗಳ ಸಂಪೂರ್ಣ ವಿವರಗಳನ್ನು ಆಡಳಿತ ಮಂಡಳಿ ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ.
ಬಸ್ ರಸ್ತೆಯಿಂದ ಜಾರಿ ಕೆಳಗೆ ಬೀಳಲು ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸ್ಥಳೀಯ ಅಧಿಕಾರಿಗಳು ಅಪಘಾತದ ಸ್ಥಳದಿಂದ ವಿವರಗಳನ್ನು ಕಲೆಹಾಕುತ್ತಿದ್ದು, ಶೋಧ ಕಾರ್ಯ ಪೂರ್ಣಗೊಂಡ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ

