ಶಿವಮೊಗ್ಗ: ತಿಥಿ ಕಾರ್ಯಕ್ರಮದಲ್ಲಿ ಊಟ ಸೇವಿಸಿದ ಬಳಿಕ ಶಾಲಾ ಮಕ್ಕಳು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ.
ಭದ್ರಾವತಿಯ ವೇಲೂರು ಶೆಡ್ನಲ್ಲಿ ತಿಥಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಊಟ ಸೇವಿಸಿದ ಬಳಿಕ ನ್ಯೂಟೌನ್ ತರಂಗ ಶಾಲೆಯ ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ.
15ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ
ತಿಥಿ ಊಟ ಸೇವಿಸಿದ ನ್ಯೂಟೌನ್ ತರಂಗ ಶಾಲೆಯ ಹಾಸ್ಟೆಲ್ನ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಮಕ್ಕಳೊಂದಿಗೆ ಊಟ ಸೇವಿಸಿದ್ದ 7ರಿಂದ 8 ಮಂದಿ ಸ್ಥಳೀಯರು ಹಾಗೂ ಸಂಬಂಧಿಕರಿಗೂ ಅಸ್ವಸ್ಥತೆ ಕಾಣಿಸಿಕೊಂಡಿದೆ. ತಕ್ಷಣವೇ ಎಲ್ಲರನ್ನೂ ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಪೂರಿತ ಆಹಾರ ಸೇವನೆ ಶಂಕೆ
ಊಟದಲ್ಲಿ ವಿಷಪೂರಿತ ಆಹಾರ ಬೆರೆತಿರುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದರೆ, ಅಸ್ವಸ್ಥತೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಹಿನ್ನೆಲೆಯಲ್ಲಿ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕ ಅಸ್ವಸ್ಥತೆಗೆ ನಿಖರ ಕಾರಣ ತಿಳಿದುಬರುವ ನಿರೀಕ್ಷೆಯಿದೆ. ಸದ್ಯ ಅಸ್ವಸ್ಥರಿಗೆ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

