ಬೆಂಗಳೂರು: ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಮುಗಿದ ನಂತರ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮರುಪರಿಶೀಲನೆ ನಡೆಸಲಾಗುವುದು.
ಗೃಹಲಕ್ಷ್ಮಿ ಫಲಾನುಭವಿಗಳ ಅರ್ಜಿ ಮರು ಪರಿಶೀಲನೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾಮಟ್ಟದ ಸರ್ಕಾರಿ ಅಧಿಕಾರಿಗಳು, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಮತ್ತು ತಾಲೂಕು ಮಟ್ಟದ ಸಮಿತಿಯಲ್ಲಿ ತಹಶೀಲ್ದಾರ್, ತಾಲೂಕು ಮಟ್ಟದ ಸರ್ಕಾರದ ಅಧಿಕಾರಿಗಳು, ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಸಮಿತಿಯಲ್ಲಿ ಇರುತ್ತಾರೆ.
ಈ ಸಮಿತಿ ಸಮ್ಮುಖದಲ್ಲಿ ಗೃಹಲಕ್ಷ್ಮಿ ಅರ್ಜಿ ಮರು ಪರಿಶೀಲನೆ ಆಗಬೇಕಿದೆ. ಸಮೀಕ್ಷೆಗೆ ಹೋದಾಗ ಯೋಜನೆ ಫಲಾನುಭವಿಗಳು ಭಾವಚಿತ್ರದ ಜೊತೆಗೆ ಮತದಾರರ ಗುರುತಿನ ಚೀಟಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಪಿಂಚಣಿದಾರರು, ಐಟಿ, ಜಿಎಸ್‌ಟಿ ತೆರಿಗೆ ಪಾವತಿದಾರರು, ಸರ್ಕಾರಿ ಸೇವೆಯಲ್ಲಿರುವವರು, ನಿವೃತ್ತಿ ಪಿಂಚಣಿ ಪಡೆಯುತ್ತಿರುವವರ ಮಾಹಿತಿ ಸಂಗ್ರಹಿಸಲಾಗುವುದು. ಆಹಾರ ಇಲಾಖೆಯ ಡೇಟಾನಲ್ಲಿ ಲಭ್ಯವಿರುವ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಫಲಾನುಭವಿಗಳನ್ನು ಪತ್ತೆ ಹಚ್ಚಬೇಕು. ಪ್ರತಿ ನ್ಯಾಯಬೆಲೆ ಅಂಗಡಿಗಳ ಮೂಲಕ ಬಯೋಮೆಟ್ರಿಕ್ ಪರಿಶೀಲಿಸಿ ಗುರುತು ಹಚ್ಚಬೇಕು. ಆಹಾರ ಇಲಾಖೆಯ ಡೇಟಾ ಬೇಸ್‌ನಲ್ಲಿ ಬಯೋಮೆಟ್ರಿಕ್ ಇರುವ ಫಲಾನುಭವಿ ಗೃಹಲಕ್ಷ್ಮೀ ಯೋಜನೆಗೆ ಬಯೋಮೆಟ್ರಿಕ್ ಕೊಡಬೇಕು. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಗಳಲ್ಲಿ ಬಯೋಮೆಟ್ರಿಕ್ ಕೊಡಬೇಕು. ಗೃಹಲಕ್ಷ್ಮೀ ಫಲಾನುಭವಿಗಳು ಸ್ವಇಚ್ಛೆಯಿಂದ ಸೌಲಭ್ಯ ನಿರಾಕರಿಸಬಹುದಾಗಿದೆ ಎಂದು ಹೇಳಲಾಗಿದೆ.

