ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ವೇಳೆ ಬೃಹತ್ ಕಬ್ಬಿಣದ ಶೀಟ್ವೊಂದು ಏಕಾಏಕಿ ರಸ್ತೆಗೆ ಬಿದ್ದಿದ್ದು, ಭಾರಿ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಮಾರತ್ಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ನಿರ್ಮಾಣ ಹಂತದಲ್ಲಿರುವ ಮೆಟ್ರೋ ನಿಲ್ದಾಣದ ಮೇಲ್ಭಾಗದಿಂದ ಬೃಹತ್ ಕಬ್ಬಿಣದ ಶೀಟ್ ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ಘಟನೆ ತಡರಾತ್ರಿ ನಡೆದಿದ್ದರಿಂದ ಸ್ಥಳದಲ್ಲಿ ಜನ ಹಾಗೂ ವಾಹನಗಳ ಸಂಚಾರ ಕಡಿಮೆ ಇತ್ತು. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಂದೇ ವೇಳೆ ಬೈಕ್ ಸವಾರರ ಮೇಲೆ ಶೀಟ್ ಬಿದ್ದಿದ್ದಕ್ಕೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ನಿರ್ಮಾಣ ಹಂತದ ಮೆಟ್ರೋ ಕಾಮಗಾರಿ ವೇಳೆ ಈ ಘಟನೆ ನಡೆದಿದೆ.
ಕಬ್ಬಿಣದ ಶೀಟ್ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಿಂದ ಮೆಟ್ರೋ ಕಾಮಗಾರಿಯ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಕೂಡ ಎದ್ದಿವೆ.
ಮಾರತ್ಹಳ್ಳಿ ಭಾಗವು ನಿರ್ಮಾಣ ಹಂತದಲ್ಲಿರುವ ನಮ್ಮ ಮೆಟ್ರೋದ ಬ್ಲೂ ಲೈನ್ ಮಾರ್ಗದಲ್ಲಿದೆ. ಕಾಮಗಾರಿ ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

