ಧಾರವಾಡ: ಕಳಪೆ ಬದನೆ ಸಸಿ ಮಾರಾಟ ಮಾಡಿದ ತಡಕೋಡದ ಕೆ.ಕೆ. ಅಗ್ರಿ ನರ್ಸರಿಗೆ 6 ಲಕ್ಷ 25 ಸಾವಿರ ರೂ. ದಂಡ ವಿಧಿಸಲಾಗಿದ್ದು, ರೈತರಿಗೆ ಪರಿಹಾರ ನೀಡಲು ಆದೇಶಿಸಲಾಗಿದೆ.
ಧಾರವಾಡ ತಾಲ್ಲೂಕಿನ ಮಂಗಳಗಟ್ಟಿ, ಮುಳಮುತ್ತಲ ಗ್ರಾಮಗಳ ರೈತರಾದ ವಿರುಪಾಕ್ಷಪ್ಪ ಸಬರದ, ಬಾಳಪ್ಪ ಪುಜಾರ, ಶಂಕರಗೌಡ ಗೌಡರ, ನಾಗಪ್ಪ ಮುಮ್ಮಿಗಟ್ಟಿ ಹಾಗೂ ಯಲ್ಲನಗೌಡ ಪಾಟೀಲ ರವರು ತಮ್ಮ ತಮ್ಮ ಜಮೀನುಗಳಲ್ಲಿ ನಾಟಿ ಮಾಡಲು ಎದುರುದಾರ ಕೆ.ಕೆ. ಅಗ್ರಿ ನರ್ಸರಿ ರವರಿಗೆ ಹಣ ಸಂದಾಯ ಮಾಡಿ ಬದನೆ ಸಸಿ ಖರೀದಿಸಿದ್ದರು.
ಆ ಸಸಿಗಳು ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಬರುವ ಹಸಿರು ಬದನೆಕಾಯಿಯ ಸಸಿಗಳು ಅಂತಾ ಎದುರುದಾರ ನರ್ಸರಿಯವರು ಎಲ್ಲ ಪಿರ್ಯಾದಿದಾರರನ್ನು ನಂಬಿಸಿ ಮಾರಾಟ ಮಾಡಿದ್ದರು. ಆ ಸಸಿಗಳನ್ನು ಖರೀದಿಸಿದ ರೈತರು ಅವುಗಳನ್ನು ತಮ್ಮ ತಮ್ಮ ಜಮೀನಿನಲ್ಲಿ ನೆಟ್ಟು ಒಳ್ಳೆ ರೀತಿಯ ಗೊಬ್ಬರ ಮತ್ತು ನೀರು ಕೊಟ್ಟು ಆ ಎಲ್ಲ ಸಸಿಗಳನ್ನು ಸಂರಕ್ಷಣೆ ಮಾಡಿದರು. ನಂತರ ಆ ಎಲ್ಲ ಬದನೆ ಗಿಡಗಳಿಂದ ಹಸಿರು ಬದನೆಕಾಯಿ ಬದಲು ಬಿಳಿ ಬದನೆಕಾಯಿ ಬೆಳೆ ಬಂದು ಎದುರುದಾರರು ಹೇಳಿದ್ದಕ್ಕಿಂತ ಅತೀ ಕಡಿಮೆ ಇಳುವರಿ ಬಂದಿರುತ್ತದೆ. ಇದರಿಂದ ತಮಗೆ ಅಪಾರ ಮೊತ್ತದ ನಷ್ಟವಾಗಿದೆ ಮತ್ತು ಎದುರುದಾರರ ನಡಾವಳಿಕೆಯಿಂದ ಅವರು ನಮಗೆ ಮೋಸ ಮಾಡಿ, ಲುಕ್ಸಾನು ಪಡಿಸಿದ್ದಾರೆ.
ಎದುರುದಾರ ತಡಕೋಡದ ಕೆ.ಕೆ. ಅಗ್ರಿ ನರ್ಸರಿ ರವರಿಂದ ತಮಗೆ ಸೇವಾ ನ್ಯೂನ್ಯತೆ ಆಗಿದೆ ಅಂತಾ ಪರಿಗಣಿಸಿ ಕ್ರಮ ಕೈಗೊಳ್ಳಲು ಎಲ್ಲ 5 ಜನ ರೈತರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಮಾರ್ಚ್ 05, 2026 ರಂದು ದೂರುಗಳನ್ನು ಸಲ್ಲಿಸಿದ್ದರು.
ಆ ಎಲ್ಲ ದೂರುಗಳನ್ನು ಆಯೋಗ ವಿಚಾರಣೆ ಕೈಗೊಂಡಿತು. ನೋಟಿಸು ಜಾರಿಯಾದರೂ ಎದುರುದಾರ ಕೆ.ಕೆ. ಅಗ್ರಿ ನರ್ಸರಿಯವರು ಆಯೋಗದ ಮುಂದೆ ಹಾಜರಾಗದೇ ಗೈರು ಉಳಿದಿದ್ದರು. ದೂರುದಾರರ ದೂರಿನ ಮೇಲೆ ಧಾರವಾಡ ತೋಟಗಾರಿಕೆ ಇಲಾಖೆಯವರು ಬಾಗಲಕೋಟೆಯ ತೋಟಗಾರಿಕೆಯ ಇಲಾಖೆಯ ವಿಜ್ಞಾನಿಗಳು, ಅಧಿಕಾರಿಗಳನ್ನು ದೂರುದಾರರ ಹೊಲಗಳಿಗೆ ಭೇಟಿ ಕೊಟ್ಟು ಬೆಳೆದ ಬದನೆ ಬೆಳೆ ಪರಿಶೀಲಿಸಿ ವರದಿ ಕೊಡುವಂತೆ ಆದೇಶ ಮಾಡಿದ್ದರು. ಬಾಗಲಕೋಟೆಯ ತೋಟಗಾರಿಕೆಯ ಇಲಾಖೆಯ ವಿಜ್ಞಾನಿಗಳು, ಅಧಿಕಾರಿಗಳು ಎಲ್ಲ ರೈತರುಗಳ ಜಮೀನುಗಳಿಗೆ ಭೇಟಿಕೊಟ್ಟು ಅವರು ಬೆಳೆದ ಬದನೆ ಬೆಳೆಯನ್ನು ಪರಿಶೀಲಿಸಿ ಕಳಪೆ ಗುಣಮಟ್ಟದ ಬಿಳಿ ಬದನೆ ಸಸಿಗಳನ್ನು ಎದುರುದಾರರು ದೂರುದಾರರಿಗೆ ಮಾರಾಟ ಮಾಡಿ ಲುಕ್ಸಾನು ಪಡಿಸಿದ್ದಾರೆ ಅಂತಾ ತಜ್ಞರು ವರದಿ ಕೊಟ್ಟಿದ್ದರು. ಆ ತಜ್ಞರ ವರದಿ ಮತ್ತು ಇತರೇ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಎದುರುದಾರ ಕೆ.ಕೆ. ಅಗ್ರಿ ನರ್ಸರಿ ರವರು ದೂರುದಾರರ ಕಳಪೆ ಗುಣಮಟ್ಟದ ಬಿಳಿ ತಳಿಯ ಬದನೆ ಸಸಿಗಳನ್ನು ನೀಡಿ ಅವರಿಗೆ ಲುಕ್ಸಾನು ಪಡಿಸಿ ಮೋಸವೆಸಗಿದ್ದಾರೆ ಅಂತಾ ತಜ್ಞರ ಆಯೋಗ ವರದಿ ನೀಡಿತ್ತು. ಅಂತಹ ಕೆ.ಕೆ. ಅಗ್ರಿ ರವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
5 ಜನ ದೂರುದಾರರು, ರೈತರಿಗೆ ಎದುರುದಾರರಿಂದ ಆಗಿರುವ ಲುಕ್ಸಾನನ್ನು ಮತ್ತು ಅದರಿಂದ ರೈತರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಯನ್ನು ಆಯೋಗ ಪರಿಗಣಿಸಿ ಪ್ರತಿಯೊಬ್ಬ ರೈತರಿಗೆ ತಲಾ ರೂ. 1,25,000 ಮತ್ತು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಪರಿಹಾರ ಕೊಡಬೇಕು ಅಂತಾ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಎದುರುದಾರರಾದ ತಡಕೋಡದ ಕೆ.ಕೆ. ಅಗ್ರಿ ನರ್ಸರಿಗೆ ನಿರ್ದೇಶಿಸಿದೆ. 5 ಜನ ದೂರುದಾರರ, ರೈತರಿಗೆ ಒಟ್ಟು ರೂ. 6,25,000 ಪರಿಹಾರ ಸಿಕ್ಕಂತಾಗಿದೆ.

