ಲಕ್ನೋ: ನಿರಂತರ ಮಳೆಗೆ ಉತ್ತರ ಪ್ರದೇಶದಾದ್ಯಂತ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಹಲವೆಡೆ ಅನಾಹುತಗಳು ಸಂಭವಿಸಿವೆ. ಮನೆ ಗೋಡೆ ಕುಸಿದು ನಾಲ್ವರು ಮಕ್ಕಳು ಸೇರಿ 9 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಪ್ರತಾಪ್ಗಢ, ಬಾರಾಬಂಕಿ ಮತ್ತು ಸಹರಾನ್ಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿದು, ನಾಲ್ವರು ಮಕ್ಕಳು ಸೇರಿ 9 ಜನರು ಮೃತಪಟ್ಟಿದ್ದಾರೆ. ಪ್ರತಾಪ್ಗಢ ಜಿಲ್ಲಾ ಕೇಂದ್ರದ ಬಳಿಯ ಮಹುಲಿ ಬಜಾರ್ನಲ್ಲಿ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಶತಮಾನದಷ್ಟು ಹಳೆಯದಾದ ಮನೆ ಕುಸಿದು ಬಿದ್ದಿದೆ.
ಘಟನೆಯಲ್ಲಿ ಪ್ರಮೋದ್ ಶ್ರೀವಾಸ್ತವ (60), ಅವರ ಪತ್ನಿ ರೀಟಾ (55), ಮಗ ನಿತಿನ್ (25), ಸೊಸೆ ಮಾಧುರಿ (24) ಹಾಗೂ ಇಬ್ಬರು ಸಣ್ಣ ಮಕ್ಕಳು ಸಾವನ್ನಪ್ಪಿದ್ದಾರೆ. ಮನೆಯ ಹಿರಿಯ ಮಗ ಅಮನ್ (28) ಅವಶೇಷಗಳ ಅಡಿಯಿಂದ ತೆವಳುತ್ತ ಹೊರಬಂದು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರಿಂದ ರಕ್ಷಣಾ ಕಾರ್ಯಾಚರಣೆ ತಕ್ಷಣ ಆರಂಭವಾಯಿತು. ಆದರೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ 6 ಮಂದಿ ಮೃತಪಟ್ಟಿದ್ದಾರೆ.
ಬಾರಾಬಂಕಿ ಜಿಲ್ಲೆಯ ಅಲಿಯಾಬಾದ್ನಲ್ಲಿ ರಸ್ತೆಬದಿ ಆಟವಾಡುತ್ತಿದ್ದ ಐದು ಮಕ್ಕಳ ಮೇಲೆ ಹಳೆಯ ಇಟ್ಟಿಗೆ ಗೋಡೆಯೊಂದು ಕುಸಿದು ಬಿದ್ದಿದೆ. ಘಟನೆಯಲ್ಲಿ 7 ವರ್ಷದ ಬಾಲಕ ಹಾಗೂ ಆತನ 14 ವರ್ಷದ ಸಹೋದರಿ ಇಬ್ಬರೂ ಮೃತಪಟ್ಟಿದ್ದು, ಇತರ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಹರಾನ್ಪುರದ ಘಾಘ್ರೇಕಿ ಗ್ರಾಮದಲ್ಲಿ ಭಾರಿ ಮಳೆಗೆ ಮಣ್ಣಿನ ಮನೆ ಕುಸಿದುಬಿದ್ದು, 34 ವರ್ಷದ ಮಹಿಳೆಯೊಬ್ಬರು ಅವಶೇಷಗಳ ಅಡಿಯಲ್ಲಿ ಸಿಲುಕಿ ಅಸಹಾಯಕರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರಕ್ಷಣಾ ಕಾರ್ಯವನ್ನು ಪರಿಶೀಲಿಸುವಂತೆ ಮತ್ತು ಮೃತರ ಕುಟುಂಬಗಳಿಗೆ ಕಂದಾಯ ಇಲಾಖೆಯ ವತಿಯಿಂದ ತಕ್ಷಣವೇ ತುರ್ತು ಪರಿಹಾರ ಧನ ಬಿಡುಗಡೆ ಮಾಡಲು ಸೂಚನೆ ನೀಡಿದೆ.
ಉತ್ತರ ಪ್ರದೇಶದಾದ್ಯಂತ ಕೆಲ ದಿನಗಳಿಂದ ನಿರಂತರವಾಅಗಿ ಮಳೆಯಾಗುತ್ತಿದ್ದು, ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸ್ಥಳೀಯ ನಗರಸಭೆ ಮತ್ತು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

