ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ತಮ್ಮ ರ‍್ಯಾಂಪ್ ವಾಕ್ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್, ಇದೀಗ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅದರ ಸುಂದರ ಫೋಟೋಗಳು ಮತ್ತು ಹಿನ್ನೆಲೆ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಐಶ್ವರ್ಯಾ ಅವರ ಈ ರಾಯಲ್ ಲುಕ್ ಕಂಡ ಅಭಿಮಾನಿಗಳು ಮಾತ್ರವಲ್ಲದೆ ಬಾಲಿವುಡ್ ತಾರೆಯರು ಕೂಡ ಅವರ ಸೌಂದರ್ಯಕ್ಕೆ ಮನಸೋತಿದ್ದಾರೆ.
ಸಿರಿಯಾದ ಪ್ರಸಿದ್ಧ ವಿನ್ಯಾಸ ಸಂಸ್ಥೆ ಯಾರಾ ಶೂಮೇಕರ್ ರೂಪಿಸಿದ ಕಪ್ಪು ವರ್ಣದ ವೆಲ್ವೆಟ್ ಗೌನ್‌ನಲ್ಲಿ ಐಶ್ವರ್ಯಾ ಮಿಂಚಿದ್ದಾರೆ. ಕ್ರಿಸ್ಟಲ್ ವಿನ್ಯಾಸದ ಶೈಲಿ, ವಜ್ರದ ಕಿರೀಟ ಮತ್ತು ಸುಂದರ ಆಭರಣಗಳು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು. ಈಟಿಫಿಲ್ ಟವರ್ ಹಿನ್ನೆಲೆಯಲ್ಲಿ ನಟಿ ನೀಡಿದ ಭಂಗಿ ಹಾಗೂ ರ‍್ಯಾಂಪ್ ವಾಕ್ ವೇಳೆ ಪ್ರೇಕ್ಷಕರಿಗೆ ಹಾರುವ ಮುದ್ದು ನೀಡಿದ ದೃಶ್ಯಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಐಶ್ವರ್ಯಾ ಅವರ ಈ ಫೋಟೋಗಳಿಗೆ ನಟಿಯರಾದ ಬಿಪಾಶಾ ಬಸು, ಸೆಲಿನಾ ಜೇಟ್ಲಿ, ಗಾಯಕಿ ಹರ್ಷದೀಪ್ ಕೌರ್ ಹಾಗೂ ಪ್ರಸಿದ್ಧ ವಿನ್ಯಾಸಕ ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಅಭಿಮಾನಿಗಳಂತೂ ಅವರನ್ನು ಬ್ರಿಟನ್ ರಾಜಕುಮಾರಿ ಡಯಾನಾ ಅವರ ವ್ಯಕ್ತಿತ್ವಕ್ಕೆ ಹೋಲಿಸಿ, ಸೌಂದರ್ಯ ಮತ್ತು ಬುದ್ಧಿವಂತಿಕೆಯ ಸಾಕಾರಮೂರ್ತಿ ಎಂದು ಪ್ರಶಂಸಿಸಿದ್ದಾರೆ. ಫ್ಯಾಷನ್ ಶೋ ಒಂದರ ವೇದಿಕೆಯಲ್ಲಿ ತಮ್ಮ ಗಂಭೀರ ಉಪಸ್ಥಿತಿಯ ಮೂಲಕ ಐಶ್ವರ್ಯಾ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಭಾರತೀಯ ಫ್ಯಾಷನ್ ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ.

