ಬೆಂಗಳೂರು: ಸ್ಕಾಟ್ಲೆಂಡ್‌ನ ಗ್ಲಾಸ್ಕೊದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕದ ಹೆಮ್ಮೆಯ ಪ್ಯಾರಾ ಅಥ್ಲೀಟ್ ಕೆ.ಎಸ್.ಶಿಲ್ಪಾ ಅವರಿಗೆ ₹15 ಲಕ್ಷ ನಗದು ಹಾಗೂ ಸರ್ಕಾರದ ಗ್ರೂಪ್ ʼಬಿʼ ಹುದ್ದೆ ನೀಡಿ ಗೌರವಿಸಲಾಗುವುದು.
ಶಿಲ್ಪಾ ಅವರ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ ಹಾಗೂ ಅವರ ಕ್ರೀಡಾ ಬದುಕು ಮತ್ತಷ್ಟು ಉಜ್ವಲವಾಗಲಿ ಎಂದು ಶುಭಹಾರೈಸುತ್ತೇನೆ. ಮುಂದಿನ ದಿನಗಳಲ್ಲಿಯೂ ಶಿಲ್ಪಾ ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಕ್ರೀಡಾಪಟುಗಳಿಗೆ ಸ್ಪೂರ್ತಿ
ಗ್ಲಾಸ್ಗೋನಲ್ಲಿ ನಡೆದ 2026ರ ಪ್ಯಾರಾ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಶಾರ್ಟ್‍ಪುಟ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆಯುವ ಮೂಲಕ ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿರುವ ಕೆ.ಎಸ್. ಶಿಲ್ಪಾ ಅವರು ಈ ನಾಡಿನ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ. ಗೋವಿಂದರಾಜು ಹೇಳಿದ್ದಾರೆ.
ಗುರುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆ.ಎಸ್.ಶಿಲ್ಪಾ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ರೀಡಾ ಇಲಾಖೆ ಒಲಂಪಿಕ್ಸ್ ಪದಕ ಗೆದ್ದವರಿಗೆ ಮೊದಲ ಬಹುಮಾನ 6 ಕೋಟಿ ರೂ., ಎರಡನೆ ಸ್ಥಾನ ಪಡೆದವರಿಗೆ 5ಕೋಟಿ ರೂ.ಹಾಗೂ ತೃತೀಯ ಸ್ಥಾನಕ್ಕೆ 3 ಕೋಟಿ ರೂ.ಬಹುಮಾನ ಘೋಷಿಸಿದೆ. ಜೊತೆಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಇತರೆ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ವಿಜೇತರಿಗೆ ಅನೇಕ ಆಕರ್ಷಕ ಕೊಡುಗೆಗಳನ್ನು ಕರ್ನಾಟಕ ರಾಜ್ಯ ಘೋಷಿಸಿದೆ ಎಂದರು.
ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್.ಅನುಚೇತ್ ಮಾತನಾಡಿ, ಈಗಾಗಲೇ ಗ್ಲಾಸ್ಗೋನಲ್ಲಿ ನಡೆದ 2026ರ ಪ್ಯಾರಾ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ 8 ಜನರಿಗೆ ಸರಕಾರದ ವತಿಯಿಂದ ತಲಾ 5ಲಕ್ಷ ರೂ.ನೀಡಲಾಗಿದೆ ಎಂದರು.
ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವ ಶಿಲ್ಪ್ಪಾ ಕೆ.ಎಸ್. ಅವರಿಗೆ 15ಲಕ್ಷ ರೂ. ನಗದು ಬಹುಮಾನ ಹಾಗೂ ಸರ್ಕಾರದ ಗ್ರೂಪ್ ‘ಬಿ’ ಹುದ್ದೆ ನೀಡಿ ಗೌರವಿಸಲಾಗುವುದು. ಉಳಿದಂತೆ ಸರಕಾರದ ಎಲ್ಲ ಸವಲತ್ತುಗಳನ್ನು ಒದಗಿಸಲಾಗುವುದು. ಎಂದರು.

