ನೋಯ್ಡಾ: ಲೋಕಸಭಾ ಸಚಿವಾಲಯದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ಮೃತರನ್ನು ಗೌರವ್ ಗೌತಮ್ ಎಂದು ಗುರುತಿಸಲಾಗಿದೆ. ನೋಯ್ಡಾದ ಸೆಕ್ಟರ್ 82 ರಲ್ಲಿರುವ ಕೇಂದ್ರೀಯ ವಿಹಾರ್-II ಸೊಸೈಟಿಯ ತಮ್ಮ ಫ್ಲಾಟ್‌ನಲ್ಲಿ ಅವರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರು 15 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ.
ಗೌರವ್ ಅವರ ಪತ್ನಿ ತಮ್ಮ ತವರು ಮನೆಗೆ ಹೋಗಿದ್ದರು. ಅವರು ಮನೆಗೆ ವಾಪಾಸ್ ಆದಾಗ ಫ್ಲಾಟ್ ಒಳಗಿನಿಂದ ಲಾಕ್ ಆಗಿತ್ತು. ಪತಿಗೆ ಪದೇ ಪದೇ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡ ಅವರು, ಸೊಸೈಟಿಯ ಭದ್ರತಾ ಸಿಬ್ಬಂದಿಯ ನೆರವಿನಿಂದ ಬಾಗಿಲು ತೆರೆಸಿ ನೋಡಿದಾಗ ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಟುಂಬಸ್ಥರು ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮೃತದೇಹದ ಬಳಿಯಲ್ಲಿತೇ 15 ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ 70 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿರುವುದಾಗಿ ಉಲ್ಲೇಖವಿದೆ. ಗೌರವ್ ಅವರು ದಿನೇ ದಿನೇ ಹೆಚ್ಚುತ್ತಿದ್ದ ಜೀವನ ವೆಚ್ಚಗಳು ಹಾಗೂ 70 ಲಕ್ಷಕ್ಕೂ ಅಧಿಕ ಸಾಲದ ಸುಳಿಗೆ ಸಿಲುಕಿದ್ದಾಗಿ ಬರೆದುಕೊಂಡಿದ್ದಾರೆ. ಈ ಕಠಿಣ ನಿರ್ಧಾರಕ್ಕೆ ತಾನೇ ಸಂಪೂರ್ಣ ಹೊಣೆ ಎಂದು ಬರೆದಿರುವ ಅವರು, ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಗಿ ತಿಳಿಸಿದ್ದಾರೆ.
ಪತ್ರದಲ್ಲಿ ಅವರು ಯಾವುದೇ ವ್ಯಕ್ತಿಯ ಮೇಲಾಗಲಿ ಅಥವಾ ಕಿರುಕುಳದ ಮೇಲಾಗಲಿ ಆರೋಪ ಮಾಡಿಲ್ಲ ಎಂದು ಫೇಸ್-2 ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿಂಗ್ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಳಿಸರು ತನಿಖೆ ನಡೆಸಿದ್ದಾರೆ.

