ತ್ರಿಷಾ ಕುರಿತ ವಿವಾದಾತ್ಮಕ ಹೇಳಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಗೊಂಡಿರುವ ತಮಿಳುನಾಡು ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ತಮಿಳಗ ವೆಟ್ರಿ ಕಳಗಂ (TVK) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹರಡಲಾಗಿದೆ ಎಂದು ಆರೋಪಿಸಿರುವ ಅವರು, ರೈತರ ಹಿತಕ್ಕಾಗಿ ಹೋರಾಡಬೇಕಾದರೆ 100 ಬಾರಿ ಬಂಧನಕ್ಕೊಳಗಾಗಲು ಸಹ ಸಿದ್ಧನಿದ್ದೇನೆ ಎಂದು ಘೋಷಿಸಿದರು.
ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉದಯನಿಧಿ, ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ತಮ್ಮನ್ನು ಬಂಧಿಸಿದೆ ಎಂದು ಆರೋಪಿಸಿದರು.”ರೈತರ ಸಂಕಷ್ಟಗಳಿಗೆ ಪರಿಹಾರ ನೀಡಲು ವಿಫಲವಾದ ‘ಸೋಫಾ ಮಾದರಿ ಸರ್ಕಾರ’ ನಿಜವಾದ ಸಮಸ್ಯೆಗಳಿಂದ ಜನರ ಗಮನ ತಿರುಗಿಸಲು ನನ್ನನ್ನು ಬಂಧಿಸಿದೆ” ಎಂದು ಅವರು ಹೇಳಿದರು.
‘ನನ್ನ ಭಾಷಣವನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ’
ತಂಜಾವೂರಿನಲ್ಲಿ ನಡೆದ ಪ್ರತಿಭಟನೆಯ ಬಳಿಕ TVK ಕಾರ್ಯಕರ್ತರು ತಮ್ಮ ಭಾಷಣವನ್ನು ಉದ್ದೇಶಪೂರ್ವಕವಾಗಿ ತಿರುಚಿ, ಅಶ್ಲೀಲ ಪದಗಳನ್ನು ಬಳಸಿದ್ದೇನೆ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಉದಯನಿಧಿ ಆರೋಪಿಸಿದರು.”ಆಡಳಿತ ಪಕ್ಷದ ‘ನಿಂದನಾ ಯೋಧರು’ ನನ್ನ ಭಾಷಣವನ್ನು ತಿರುಚಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡಲು ಯತ್ನಿಸಿದ್ದಾರೆ” ಎಂದು ಅವರು ಹೇಳಿದರು.
‘ನನ್ನ ಬಂಧನವೇ ಒಂದು ಕಾಮಿಡಿ’
ಚೆನ್ನೈನಿಂದ ತಂಜಾವೂರಿಗೆ ಕರೆದೊಯ್ದು ಕಿರುಕುಳ ನೀಡಲು ಸರ್ಕಾರ ಯತ್ನಿಸಿದೆ ಎಂದು ಆರೋಪಿಸಿದ ಅವರು, ತಮ್ಮ ಬಂಧನವನ್ನು “ಒಂದು ಕಾಮಿಡಿ” ಎಂದು ಕರೆದರು.”ಬಂಧನದ ಬಳಿಕ ನಾನು ಮಾಧ್ಯಮಗಳಿಗೆ ಇದು ಕಾಮಿಡಿ ಎಂದು ಹೇಳಿದ್ದೆ. ನಾನು ಪೊಲೀಸರ ಭಯದಿಂದ ಓಡಿಹೋಗಿಲ್ಲ” ಎಂದು ಸ್ಪಷ್ಟಪಡಿಸಿದರು.
‘ಮುಖ್ಯಮಂತ್ರಿಗೆ ಬಂಧನದ ಭಯ ಇರಬಹುದು; ನನಗಿಲ್ಲ’
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ವಿರುದ್ಧವೂ ವಾಗ್ದಾಳಿ ನಡೆಸಿದ ಉದಯನಿಧಿ, ಕರೂರು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಲಿಲ್ಲ, ಮಾಧ್ಯಮಗಳನ್ನು ಎದುರಿಸಲಿಲ್ಲ ಎಂದು ಆರೋಪಿಸಿದರು.”ಮುಖ್ಯಮಂತ್ರಿಗೆ ಬಂಧನದ ಭಯ ಇರಬಹುದು. ಆದರೆ ನನಗಿಲ್ಲ. ನಾನು ಕಲೈಞರ್ ಅವರ ಮೊಮ್ಮಗ, ಎಂ.ಕೆ. ಸ್ಟಾಲಿನ್ ಅವರ ಮಗ” ಎಂದು ಹೇಳಿದರು.
‘ರೈತರಿಗಾಗಿ 100 ಬಾರಿ ಬಂಧನಕ್ಕೂ ಸಿದ್ಧ’
ರೈತರ ಪರ ಹೋರಾಟವನ್ನು ಯಾವ ಒತ್ತಡವೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ ಉದಯನಿಧಿ,”ರೈತರ ಹಿತಕ್ಕಾಗಿ ಒಂದು ಬಾರಿ ಅಲ್ಲ, 100 ಬಾರಿ ಬಂಧನಕ್ಕೊಳಗಾಗಬೇಕಾದರೂ ಸಿದ್ಧನಿದ್ದೇನೆ. 300 ಕಿ.ಮೀ ಅಲ್ಲ, 3,000 ಕಿ.ಮೀ ದೂರಕ್ಕೂ ಕರೆದೊಯ್ಯಲಿ, ಜನರಿಗಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಘೋಷಿಸಿದರು.ತಮ್ಮ ಬಂಧನವನ್ನು ಖಂಡಿಸಿ ಬೆಂಬಲ ವ್ಯಕ್ತಪಡಿಸಿದ ಮೈತ್ರಿ ಪಕ್ಷಗಳ ನಾಯಕರು, ವಿವಿಧ ರಾಜಕೀಯ ಸಂಘಟನೆಗಳು ಹಾಗೂ ಡಿಎಂಕೆ ಕಾರ್ಯಕರ್ತರಿಗೆ ಅವರು ಧನ್ಯವಾದಗಳನ್ನು ತಿಳಿಸಿದರು.
ವಿವಾದ ಹೇಗೆ ಆರಂಭವಾಯಿತು?
ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಂಜಾವೂರಿನಲ್ಲಿ ನಡೆದ ಡಿಎಂಕೆ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಭಾಷಣ ಮಾಡುತ್ತಿದ್ದ ವೇಳೆ, ಕೆಲ ಕಾರ್ಯಕರ್ತರು ನಟಿ ತ್ರಿಷಾ ಅವರ ಹೆಸರನ್ನು ಕೂಗಿದರು. ಇದಕ್ಕೆ ಉದಯನಿಧಿ ಪ್ರತಿಕ್ರಿಯಿಸಿದ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಈ ಸಂಬಂಧ ದಾಖಲಾಗಿದ್ದ ಪ್ರಕರಣದಡಿ ಮಂಗಳವಾರ ಚೆನ್ನೈನ ನೀಲಾಂಕರೈ ನಿವಾಸದಿಂದ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

