ನವದೆಹಲಿ: ವಿಮೆ ಇಲ್ಲದ ವಾಹನಗಳಿಗೆ ಇನ್ನು ಮುಂದೆ ಬಂಕ್ ಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ. ಬಂಕ್ ಗಳಲ್ಲಿ ವಿಮೆ ಇಲ್ಲದ ವಾಹನಗಳಿಗೆ ಇಂಧನ ನಿರಾಕರಿಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಪ್ರಾಯೋಗಿಕ ಯೋಜನೆ ಜಾರಿಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ದೇಶದಲ್ಲಿ ಶೇ. 56 ರಷ್ಟು ವಾಹನಗಳು ವಿಮೆ ಇಲ್ಲದೆ ಸಂಚರಿಸುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ಮಾನ್ಯವಾದ ವಿಮೆ ಹೊಂದುವವರೆಗೆ ಬಂಕ್ ಗಳಲ್ಲಿ ವಾಹನಗಳ ಇಂಧನ ನಿರಾಕರಿಸುವ ಪ್ರಾಯೋಗಿಕ ಯೋಜನೆ ಜಾರಿಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮೋಟಾರು ವಾಹನ ಕಾಯ್ದೆಯಡಿ ಪ್ರತಿ ವಾಹನಕ್ಕೂ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿದ್ದು, ಉಲ್ಲಂಘನೆ ಆಗುತ್ತಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಒಳಗೊಂಡ ಪೀಠ ದೇಶದಲ್ಲಿರುವ ಒಟ್ಟು 30.48 ಕೋಟಿ ವಾಹನಗಳಲ್ಲಿ 16.54 ಕೋಟಿ ವಾಹನಗಳು ವಿಮೆ ಹೊಂದಿಲ್ಲ. ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಶೇಕಡ 56 ರಷ್ಟು ವಾಹನಗಳಿಗೆ ವಿಮೆ ಇಲ್ಲದಿರುವುದು ಅಚ್ಚರಿ ಹುಟ್ಟಿಸುವಂತಿದೆ. ವಿಮೆ ಇಲ್ಲದಿರುವುದರಿಂದ ಅಪಘಾತದ ಸಂತ್ರಸ್ತರಿಗೆ ಪರಿಹಾರ ವಿಳಂಬವಾಗುತ್ತದೆ ಅಥವಾ ಸಿಗುವುದೇ ಇಲ್ಲ. ವಿಮೆ ಕಡ್ಡಾಯಗೊಳಿಸಿರುವುದರ ಉದ್ದೇಶ ಸಂತ್ರಸ್ತರಿಗೆ ಕೇವಲ ಪರಿಹಾರ ಒದಗಿಸುವುದಷ್ಟೇ ಅಲ್ಲ, ಅವರು ದೀರ್ಘಕಾಲದ ಕಾನೂನು ಹೋರಾಟದಲ್ಲಿ ಸಿಲುಕಿ ಕೊಳ್ಳಬಾರದು ಎಂಬುದು ಕೂಡ ಆಗಿದೆ.
ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ಹೆದ್ದಾರಿ ಸಚಿವಾಲಯದ ಜೊತೆ ಸಮಾನಲೋಚನೆ ನಡೆಸಿ ವಾಹನದ ವಿಮೆಯ ಸ್ಥಿತಿಯನ್ನು ಇಂಧನ ಪೂರೈಕೆಗೆ ಲಿಂಕ್ ಮಾಡುವ ಪ್ರಾಯೋಗಿಕ ಯೋಜನೆಯನ್ನು ರೂಪಿಸಬೇಕು. ವಿಮೆ ಇಲ್ಲದ ವಾಹನಗಳಿಗೆ ವಿಮೆ ಪಡೆಯುವವರೆಗೆ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ನಿರಾಕರಿಸಬೇಕು ಎಂದು ತಿಳಿಸಿದೆ.
ವಿಮೆ ಇಲ್ಲದ ವಾಹನಗಳ ಪತ್ತೆಗೆ ಅವುಗಳ ನಂಬರ್ ಪ್ಲೇಟ್ ಬಳಸಿಕೊಂಡು ಸ್ವಯಂ ಚಾಲಿತವಾಗಿ ಪತ್ತೆ ಮಾಡುವ ವ್ಯವಸ್ಥೆಯನ್ನು ಕೆಲವೊಂದು ಕಾರಿಡಾರ್ ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

