ಸ್ಯಾಂಡಲ್ವುಡ್ನಲ್ಲಿ ಹೊಸ ಹೊಸ ಪ್ರಯೋಗಗಳ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದು, ಆ ಸಾಲಿಗೆ ಇದೀಗ ‘ಅಕ್ಷರ’ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಚಿತ್ರದ ಅಧಿಕೃತ ಟ್ರೇಲರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಸಿನಿಮಾ ಬಿಡುಗಡೆಯ ದಿನಾಂಕವೂ ಅಧಿಕೃತವಾಗಿ ಹೊರಬಿದ್ದಿದೆ.
ವಿಶ್ಮಿತಾ ಮತ್ತು ಗಿತಿಶಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಎಸ್ ನರೇಂದ್ರ ಬಾಬು ಅವರು ನಿರ್ದೇಶನ ಮಾಡಿದ್ದಾರೆ. ಕಿಶೋರ್ ಕುಮಾರ್ ಜಿ ಅವರು ಚಿತ್ರಕ್ಕೆ ಬಂಡವಾಳ ಹೂಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ಅಭಿನಯಿಸಿದ್ದಾರೆ. ಭುವನ್ ಚಂದ್ರ ಮತ್ತು ಅಲ್ಮಾಸ್ ಮೋತಿವಾಲಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ರಮೇಶ್ ಪಂಡಿತ್, ಭಜರಂಗಿ ಪ್ರಸನ್ನ, ರಾಜ್ ಉದಯ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.
ಚಿತ್ರಕ್ಕೆ ಆನಂದ್ ರಾಜ್ವಿಕ್ರಮ್ ಸಂಗೀತ ಸಂಯೋಜಿಸಿದ್ದು, ಸ್ಯಾಮ್ ಸೈಮನ್ ಜಾರ್ಜ್ ಅವರ ಹಿನ್ನೆಲೆ ಸಂಗೀತವಿದೆ. ಜೀವಾ ಆಂಟೋನಿ ಅವರ ಛಾಯಾಗ್ರಹಣ ಹಾಗೂ ಲೋಕೇಶ್ ಪುಟ್ಟೇಗೌಡ ಅವರ ಸಂಕಲನ ಚಿತ್ರಕ್ಕಿದೆ. ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಅಕ್ಷರ’ ಸಿನಿಮಾ ಬರುವ ಆಗಸ್ಟ್ 7 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

