HomeLatest Newsತಕ್ಷಣವೇ ಬರಪೀಡಿತ ಪ್ರದೇಶಗಳಿಗೆ ತೆರಳಿ; ನೂತನ ಸಚಿವರಿಗೆ ಡಿಕೆಶಿ ಸೂಚನೆ

ತಕ್ಷಣವೇ ಬರಪೀಡಿತ ಪ್ರದೇಶಗಳಿಗೆ ತೆರಳಿ; ನೂತನ ಸಚಿವರಿಗೆ ಡಿಕೆಶಿ ಸೂಚನೆ

ಬೆಂಗಳೂರು-“ಬುಧವಾರದಿಂದಲೇ ನೂತನ ಸಚಿವರುಗಳು ತಮಗೆ ಜವಾಬ್ದಾರಿ ವಹಿಸುವ ಜಿಲ್ಲೆಗಳಿಗೆ ಹೋಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಅಲ್ಲಿನ ಸ್ಥಳಗಳಿಗೆ ಹೋಗಿ, ಪರಿಶೀಲನೆ ಮಾಡಬೇಕು. ನಂತರ ಕಂದಾಯ ಸಚಿವರಿಗೆ ವರದಿ ಸಲ್ಲಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ಮುಂದಿರುವ ಸವಾಲು, ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬರಗಾಲ ಹಾಗೂ ಕಾವೇರಿ ಭಾಗದ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ತಾತ್ಕಾಲಿಕವಾಗಿ ಮಳೆಯಿಂದ ಸಮಸ್ಯೆ ನಿವಾರಣೆಯಾಗಿರಬಹುದು. ಭೀಕರವಾದ ಕಂಟಕ ಎದುರಾಗಿತ್ತು. ದೇವರ ಕೃಪೆಯಿಂದ ಇದು ಸಧ್ಯಕ್ಕೆ ನಿವಾರಣೆಯಾಗಿದೆ. ತಮಿಳುನಾಡಿಗೆ 3,50 ಕ್ಯೂಸೆಕ್ ನೀರು ಹರಿಸುವಂತೆ ಹೇಳಿದ್ದು, ನಾವು 30 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತಾಗಿದೆ. ಕೆಆರ್ ಎಸ್, ಹೇಮಾವತಿ ತುಂಬಿಲ್ಲ, ಒಳಹರಿವು ಹೆಚ್ಚಿದೆ. ಮಲೆನಾಡಿನಲ್ಲಿ ಮಳೆ ಬೀಳುತ್ತಿದ್ದು, ತುಂಗಭದ್ರಾಗೆ ಇನ್ನು ನೀರು ಬರಬೇಕು. ಆಲಮಟ್ಟಿಯಲ್ಲಿ ನೀರಿನ ಹರಿವು ಇದೆ. ಬರಗಾಲದ ಛಾಯೆ ಇನ್ನು ಇದೆ. ಮಳೆಯಿಂದಾಗಿ ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಅನಾಹುತಗಳು ಆಗಿವೆ. ನಾನು ವರದಿ ತರಿಸಿಕೊಂಡು ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.

ಎಲ್ಲ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲಿಸಲು ಸೂಚನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಸಚಿವ ಸಂಪುಟ ವಿಸ್ತರಣೆಯಾಗುವ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರಿಂದ ಪರಿಹಾರ ಘೋಷಣೆ ಮಾಡಿಸಲು ತೀರ್ಮಾನಿಸಿದ್ದೇವೆ. ನಾಳೆ ಒಂದು ದಿನ ಹೊರತುಪಡಿಸಿ ನಾಡಿದ್ದಿನಿಂದ ನೀವುಗಳು ನಿಮಗೆ ಜವಾಬ್ದಾರಿ ವಹಿಸುವ ಜಿಲ್ಲೆಗಳಿಗೆ ಹೋಗಿ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಬೇಕು. ನಂತರ ಕಂದಾಯ ಸಚಿವರಿಗೆ ವರದಿ ನೀಡಬೇಕು. ವಿರೋಧ ಪಕ್ಷದ ನಾಯಕರು ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಕಂದಾಯ ಸಚಿವರಾಗಿದ್ದವರು. ಸಾಕಷ್ಟು ಅನುಭವಸ್ಥರು. ಅವರಿಗೆ ಸಮಯ ಬಂದಾಗ ಉತ್ತರ ನೀಡೋಣ. ನಾನು ಈಗಾಗಲೇ ಬೆಳಗಾವಿ, ಚಿತ್ರದುರ್ಗ, ಕಲಬುರ್ಗಿ ವಿಭಾಗಗಳಲ್ಲಿ ಸಭೆ ಮಾಡಿದ್ದು, ಮೈಸೂರು ವಿಭಾಗದ ಸಭೆಯನ್ನು ಶೀಘ್ರವೇ ಮಾಡಲಾಗುವುದು. ಎಲ್ಲರ ಸಲಹೆ ಪಡೆಯಲಾಗಿದ್ದು, ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿ ವಿಧಾನಸಭೆಗೆ 1 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಹೋಗಿ ವರದಿ ನೀಡಬೇಕು. ನಂತರ ಸರ್ಕಾರ ತೀರ್ಮಾನ ಮಾಡಲಿದೆ. ಎಲ್ಲಾ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.

ಸಂಪುಟ ವಿಸ್ತರಣೆ ಮತ್ತು ಹೊಸ ಸಚಿವರ ಆಯ್ಕೆ

“ಸುಮಾರು 2 ಗಂಟೆಗಳ ಕಾಲ ಸಚಿವ ಸಂಪುಟದ ನೂತನ ಸದಸ್ಯರಿಗೆ ಮಾರ್ಗದರ್ಶನ ನೀಡಿದ್ದೇವೆ. ನಮ್ಮಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದರೂ ನಾವು ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ. ನಾನು ಹಾಗೂ ಪರಮೇಶ್ವರ್ ಅವರು ಮೊದಲ ಬಾರಿಗೆ ಶಾಸಕರಾಗಿ ಮಂತ್ರಿಯಾಗಿದ್ದೇವೆ. ಕೆಲವು ಸಂದರ್ಭದಲ್ಲಿ ನಮ್ಮನ್ನು ಸಚಿವರನ್ನಾಗಿ ಮಾಡಿದ್ದಾರೆ. ಕೆಲವೊಮ್ಮೆ ಮಾಡಿಲ್ಲ. ನಾವು ಅಲ್ಲಿಂದ ಇಲ್ಲಿಯವರೆಗೆ ಬಂದು ಈ ಸ್ಥಾನ ತಲುಪಿದ್ದೇವೆ. ಇಂದು 19 ಸದಸ್ಯರು ಸಂಪುಟ ಸೇರ್ಪಡೆಯೊಂದಿಗೆ ವಿಸ್ತರಣೆಯಾಗಿದೆ. ನಮ್ಮಲ್ಲಿ ಅನೇಕ ಅರ್ಹರು ಇದ್ದರು. ನಮ್ಮಲ್ಲಿ ಅರ್ಹತೆ ಇಲ್ಲದವರು ಯಾರೂ ಇಲ್ಲ. ನಮ್ಮ ಪಕ್ಷ ತೀರ್ಮಾನ ಮಾಡಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ನಾನು ಹಾಗೂ ಪರಮೇಶ್ವರ್ ಅವರು ಬಂದಾಗ, ವೀರೇಂದ್ರ ಪಾಟೀಲ್ ಅವರು ಸಿಎಂ ಆಗಿದ್ದರು. ಆಗ ಬಂಗಾರಪ್ಪನವರು ಸಚಿವ ಸಂಪುಟದಲ್ಲಿ ಇರಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಲಕ್ಕಪ್ಪನವರು ಇರಲಿಲ್ಲ. ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಅಜೀಜ್ ಸೇಠ್ ಅವರು ಸಂಪುಟದಲ್ಲಿ ಸ್ಥಾನ ಪಡೆಯಲು ಆಗಿರಲಿಲ್ಲ. ಆಸೆ ಎಲ್ಲರಿಗೂ ಇರುತ್ತದೆ, ತಾಳ್ಮೆಯಿಂದ ಇದ್ದರೆ ನಾವು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಅವಕಾಶ ನೀಡಲಾಗುವುದು. ನಾನು ಹಾಗೂ ಪರಮೇಶ್ವರ್ ಅವರು ನಮ್ಮ ಶಾಸಕರ ಜೊತೆ ಚರ್ಚೆ ಮಾಡುತ್ತೇವೆ. ಎಲ್ಲರಿಗೂ ಗೌರವ ನೀಡುತ್ತೇವೆ” ಎಂದು ವಿವರಿಸಿದರು.

ಮಹಿಳೆಯರಿಗೆ ಸಚಿವ ಸ್ಥಾನ ನೀಡುವ ಭರವಸೆ

“ನಂತರ ಧರಂ ಸಿಂಗ್ ಅವರ ಕಾಲದಲ್ಲಿ ನನ್ನನ್ನು ಹಾಗೂ ಪರಮೇಶ್ವರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರಲಿಲ್ಲ. ನಾವು ಬಹಳ ತಾಳ್ಮೆಯಿಂದ ಇದ್ದೆವು. ನಮ್ಮ ತಾಳ್ಮೆಗೆ ಇಂದು ಪಕ್ಷ ನನ್ನನ್ನು ಮುಖ್ಯಮಂತ್ರಿ ಮಾಡಿದೆ, ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ.ಇರೋದು 33 ಸ್ಥಾನ ಮಾತ್ರ. ಕೃಷ್ಣಾ ಅವರ ಕಾಲದಲ್ಲೇ ಎಷ್ಟು ಜನ ಬೇಕೋ ಅಷ್ಟು ಜನರನ್ನು ಮಂತ್ರಿ ಮಾಡುವ ಕಾಲ ಮುಗಿದಿದೆ. ಕೇವಲ 15%ಗೆ ಮಿತಿ ಹಾಕಲಾಗಿದೆ. ಮೇಲ್ಮನೆಯಿಂದ ಒಬ್ಬರು ಕಡ್ಡಾಯವಾಗಿ ಇರಲಿದೆ. ಮಹಿಳೆಯರಿಗೆ ಸ್ಥಾನ ಸಿಕ್ಕಿಲ್ಲ ಎಂಬ ಪ್ರಶ್ನೆಯೂ ನಿಮ್ಮಲ್ಲಿ ಮೂಡಬಹುದು. ಆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದನ್ನು ನಾವು ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ ಮಹಿಳೆಗೆ ಆದ್ಯತೆ ನೀಡುವುದು. ಈ ಹಿಂದೆಯೂ ಮಹಿಳೆಯರು ಇದ್ದರು, ಈಗ ಮಹಿಳೆಗೆ ಉಪಸಭಾಪತಿ ಸ್ಥಾನ ನೀಡಿದ್ದೇವೆ. ಸಚಿವ ಸಂಪುಟದಲ್ಲೂ ಒಂದು ಸ್ಥಾನ ಮಹಿಳೆಯರಿಗೆ ನೀಡಲಾಗುವುದು” ಎಂದು ಭರವಸೆ ನೀಡಿದರು.

ಕಾವೇರಿ ವಿವಾದ: ಕಾನೂನು ಹೋರಾಟಕ್ಕೆ ಸಿದ್ಧತೆ

ತಮಿಳುನಾಡು ನ್ಯಾಯಾಲಯದ ಮೆಟ್ಟಿಲೇರಿರುವ ಬಗ್ಗೆ ಕೇಳಿದಾಗ, “ಕಾವೇರಿ ವಿಚಾರದಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಅವರಿಗೆ ಕಾನೂನು ಮೂಲಕ ಉತ್ತರ ನೀಡಲಾಗುವುದು. ಕಾವೇರಿ ವಿಚಾರದಲ್ಲಿ ತಮಿಳುನಾಡು ನ್ಯಾಯಾಲಯದ ಮೇಟ್ಟಿಲೇರಿದೆ ಎಂಬ ಮಾಹಿತಿ ಬಂದಿದೆ. ನಾನು ಅವರ ಹಕ್ಕನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ನಾನು ದೇಶದ ಕಾನೂನನ್ನು ಗೌರವಿಸಿದ್ದೇವೆ. ನಾವು ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದು ತಕ್ಷಣವೇ ತೀರ್ಮಾನ ಮಾಡಲಿಲ್ಲ. ನಮಗೆ ಬಿಜೆಪಿ ಹಾಗೂ ಜೆಡಿಎಸ್ ಸಹಕಾರ ನೀಡಿವೆ. ಈ ವಿಚಾರದಲ್ಲಿ ಇಡೀ ಕರ್ನಾಟಕ ಒಗ್ಗಟ್ಟಾಗಿ ನಿಂತಿದೆ. ಭವಿಷ್ಯದಲ್ಲೂ ಅವರು ನಮ್ಮ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಸಹಕಾರ ನೀಡಿರುವ ನಮ್ಮ ರಾಜ್ಯದ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಪ್ರಹ್ಲಾದ್ ಜೋಷಿ ಅವರು ಸಂಸದರ ನಿಯೋಗವನ್ನು ಕೇಂದ್ರ ಸಚಿವರ ಬಳಿಗೆ ಕೊಂಡೊಯ್ದಿದ್ದು ಮನವಿ ಮಾಡಿದ್ದಾರೆ. ವರುಣ ದೇವರ ಕೃಪೆ ಕೂಡ ನಮ್ಮ ಮೇಲಿದೆ. ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಕಾನೂನು ಚೌಕಟ್ಟಿನಲ್ಲಿ ಪಾಲನೆ ಮಾಡುತ್ತಿದ್ದೇವೆ. ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರ 15 ದಿನಗಳಿಗೊಮ್ಮೆ ಸಭೆ ಮಾಡಲಿದ್ದು, ಪರಿಸ್ಥಿತಿ ಅನುಗುಣವಾಗಿ ತೀರ್ಮಾನ ಮಾಡಲಿವೆ. ನಾವು ಅವರಿಗೆ ಪರಿಸ್ಥಿತಿ ವಿವರಿಸುತ್ತೇವೆ” ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular