ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಅರಸನಘಟ್ಟ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಪುತ್ರನೊಬ್ಬ ತಂದೆಯನ್ನೇ ಕತ್ತುಹಿಸುಕಿ ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಶಿವಗನಾಯ್ಕ್(55) ಕೊಲೆಯಾದ ವ್ಯಕ್ತಿ. ಅವರ ಪುತ್ರ ಮಂಜುನಾಥ್ ನಾಯ್ಕ್ ಆರೋಪಿಯಾಗಿದ್ದಾನೆ. ಎರಡು ವರ್ಷದ ಹಿಂದೆ ಶಿವಗನಾಯ್ಕ್ ಹೊಸ ಮನೆ ಕಟ್ಟಿಸಿ ಪತ್ನಿ ಮಕ್ಕಳು ಸೊಸೆಯಂದಿರೊಂದಿಗೆ ವಾಸವಾಗಿದ್ದರು. ಮನೆ ಕಟ್ಟಲು ಹಾಗೂ ಇಬ್ಬರು ಮಕ್ಕಳ ಮದುವೆಗೆ ಅವರು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸಾಲದ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿದ್ದು, ನಂತರ ಇಬ್ಬರು ಮಕ್ಕಳನ್ನು ಹಳೆ ಮನೆಯಲ್ಲಿ ಇರುವಂತೆ ತಂದೆ ಶಿವಗನಾಯ್ಕ್ ಸೂಚಿಸಿ ಎಲ್ಲರನ್ನು ಮನೆಯಿಂದ ಹೊರಹಾಕಿ ಹೊಸ ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ.
ಭಾನುವಾರ ರಾತ್ರಿ ಕುಡಿದು ಬಂದು ಹಳೆ ಮನೆಯಲ್ಲಿದ್ದ ಪತ್ನಿಯೊಂದಿಗೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದಾಗ ಮಧ್ಯಪ್ರವೇಶಿಸಿದ ಹಿರಿಯ ಪುತ್ರ ಮಂಜುನಾಥ್ ನಾಯ್ಕ್ ತಂದೆಯೊಂದಿಗೆ ವಾಗ್ವಾದ ನಡೆಸಿ ಕೈಯಿಂದ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದಾನೆ. ಇದರಿಂದ ಉಸಿರುಗಟ್ಟಿ ಶಿವಗನಾಯ್ಕ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೊಳೆಹೊನ್ನೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

