ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಲವು ಸಚಿವಾಕಾಂಕ್ಷಿಗಳಿಗೆ ಮಂತ್ರಿ ಸ್ಥಾನ ಕೈತಪ್ಪಿದೆ. ಇದರಿಂದ ಅಸಮಾಧಾನಗೊಂಡಿರುವ ಹಿರಿಯ ಶಾಸಕರು ಮನನೊಂದು ರಾಜೀನಾಮೆಗೆ ಮುಂದಾಗಿದ್ದಾರೆ.
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ಇಂಡಿ ಶಾಸಕ ಯಶವಂತರಾಯಗೌಡ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಈ ರೀತಿಯ ವ್ಯವಸ್ಥೆಯಲ್ಲಿ ಇಅರಲು ನನಗೆ ಇಷ್ಟವಿಲ್ಲ. ಮನಸ್ಸಿಗೆ ತುಂಬಾ ನೋವಾಗಿದೆ. ಹಿರಿತನಕ್ಕೂ ಗೌರವವಿಲ್ಲವೆಂದಮೇಲೆ ರಾಜಕಾರಣ ಯಾಕೆ ಬೇಕು? ಶಾಸಕ ಸ್ಥಾನ ಯಾಕೆ ಬೇಕು? ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಶವಂತರಾಯಗೌಡ, ರಾಜೀನಾಮೆ ಪತ್ರ ಸಿದ್ಧವಾಗಿದೆ. ಇಂದೇ ರಾಜೀನಾಮೆ ಕೊಡುತ್ತೇನೆ ಎಂದರು. ನಿನ್ನೆ ಕರೆ ಮಾಡಿ ನೀವು ರೆಡಿ ಇರಿ ಸಚಿವ ಸ್ಥಾನದಲ್ಲಿ ಹೆಸರಿದೆ ಅಂದು ಇಂದು ಹೀಗೆ ಅನ್ಯಾಯ ಮಾಡುತ್ತಾರೆ ಎಂದರೆ ಏನು ಹೇಳಬೇಕು? ಹಾಗಾಗಿ ಮನಸ್ಸಿಗೆ ಬಹಳ ನೋವಾಗಿದೆ. ನಿಷ್ಠಾವಂತರು, ನಮ್ಮಂತ ಪ್ರಾಮಾಣಿಕರಿಗೆ ಇದು ಕಾಲವಲ್ಲ. ಇಲ್ಲಿ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.

