ಹಾಸನ: ತಂದೆ ಮೊಬೈಲ್ ಫೋನ್ ಕೊಡಿಸದಿದ್ದಕ್ಕೆ ಮನನೊಂದು 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಹಾಸನ ಹೊರವಲಯದ ಯಡಿಯೂರು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಪ್ರೀತಮ್ (13) ಎಂದು ಗುರುತಿಸಲಾಗಿದೆ. ಪ್ರೀತಮ್ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ಗಾಗಿ ತಂದೆಯನ್ನು ಪದೇ ಪದೇ ಒತ್ತಾಯಿಸುತ್ತಿದ್ದ. ಆದರೆ ಓದಿನ ಮೇಲೆ ಪರಿಣಾಮ ಬೀಳಬಹುದು ಎಂಬ ಕಾರಣಕ್ಕೆ ತಂದೆ ಮೊಬೈಲ್ ಕೊಡಿಸಲು ನಿರಾಕರಿಸಿದ್ದರು. ಇದರಿಂದ ಮನನೊಂದ ಬಾಲಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ತಿಳಿದ ಕೂಡಲೇ ಕುಟುಂಬದವರು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೊಬೈಲ್ ಬಳಕೆಯ ಮೇಲಿನ ಅತಿಯಾದ ಅವಲಂಬನೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಮಕ್ಕಳೊಂದಿಗೆ ಪೋಷಕರು ನಿರಂತರವಾಗಿ ಸಂವಹನ ನಡೆಸುವುದು, ಪರದೆ (ಸ್ಕ್ರೀನ್) ಬಳಕೆಗೆ ಮಿತಿಯನ್ನು ನಿಗದಿಪಡಿಸುವುದು ಹಾಗೂ ಅವರ ಭಾವನಾತ್ಮಕ ಸ್ಥಿತಿಯ ಕಡೆ ಹೆಚ್ಚಿನ ಗಮನ ಹರಿಸುವುದು ಅಗತ್ಯವೆಂದು ಸಲಹೆ ನೀಡಲಾಗಿದೆ.

