ರಾಜಧಾನಿಯ ಸಂಚಾರ ದಟ್ಟಣೆಗೆ ಶಮನ ನೀಡಲು ಸಿದ್ಧವಾಗುತ್ತಿರುವ ನಮ್ಮ ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಹೊಸ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದೆ. ಹೆಬ್ಬಾಳದಿಂದ ಸರ್ಜಾಪುರ ಸಂಪರ್ಕಿಸುವ 37.8 ಕಿ.ಮೀ ಉದ್ದದ ಕೆಂಪು ಮಾರ್ಗವು (3 ಎ) ಮಲ್ಟಿ ಮಾಡಲ್ ಇಂಟಿಗ್ರೇಷನ್ ಮಾದರಿಯಲ್ಲಿ ನಗರದ ಪ್ರಮುಖ 8 ಕಡೆಗಳಲ್ಲಿ ಇಂಟರ್‌ಚೇಂಜ್ (ಮಾರ್ಗ ಬದಲಾವಣೆ) ಸೌಲಭ್ಯವನ್ನು ಹೊಂದಿರಲಿದೆ.
ಪ್ರಸ್ತುತ ನಮ್ಮ ಮೆಟ್ರೋ ಜಾಲದಲ್ಲಿ ಮೆಜೆಸ್ಟಿಕ್ ಹಾಗೂ ಆರ್‌ವಿ ರಸ್ತೆ ನಿಲ್ದಾಣಗಳು ಮಾತ್ರ ಇಂಟರ್‌ಚೇಂಜ್ ಸೌಲಭ್ಯ ಹೊಂದಿವೆ. ಆದರೆ ಈ ಹೊಸ ಕೆಂಪು ಮಾರ್ಗವು ಕಾರ್ಯಾಚರಣೆಗೆ ಬಂದಾಗ, ಪ್ರಯಾಣಿಕರು ಸುಲಭವಾಗಿ ಬೇರೆ ಮೆಟ್ರೋ ಮಾರ್ಗಗಳಿಗೆ ಉಪನಗರ ರೈಲು (Suburban Rail) ಹಾಗೂ ಬಿಎಂಟಿಸಿ ಬಸ್‌ಗಳಿಗೆ ಬದಲಾಯಿಸಲು ಸಾಧ್ಯವಾಗಲಿದೆ.
8 ಇಂಟರ್‌ಚೇಂಜ್‌ಗಳು ಎಲ್ಲೆಲ್ಲಿ ನಿರ್ಮಾಣ?
ಸರ್ಜಾಪುರ
ಕಾರ್ಮೆಲಾ ರಾಮ್
ಇಬ್ಬಲೂರು
ಆಗರ
ಡೇರಿ ಸರ್ಕಲ್
ಶಾಂತಿನಗರ
ಕೆ.ಆರ್. ಸರ್ಕಲ್
ಹೆಬ್ಬಾಳ
ಎಲ್ಲೆಲ್ಲಿ ಜಂಕ್ಷನ್? ಯಾವುದಕ್ಕೆ ಸಂಪರ್ಕ?
ವಿಮಾನ ನಿಲ್ದಾಣ ಮತ್ತು ಸಿಲ್ಕ್ ಬೋರ್ಡ್: ಇಬ್ಬಲೂರು ಮತ್ತು ಆಗರ ನಿಲ್ದಾಣಗಳು ‘ನೀಲಿ ಮಾರ್ಗ’ವನ್ನು (2 ‘ಎ’) ಸಂಧಿಸಲಿದ್ದು, ವಿಮಾನ ನಿಲ್ದಾಣ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ಕಡೆಗೆ ತೆರಳಲು ನೆರವಾಗಲಿದೆ.
ಗುಲಾಬಿ ಹಾಗೂ ನೇರಳೆ ಮಾರ್ಗಗಳು: ಡೇರಿ ಸರ್ಕಲ್ ನಿಲ್ದಾಣವು ‘ಗುಲಾಬಿ ಮಾರ್ಗ’ಕ್ಕೆ ಸಂಪರ್ಕ ಕಲ್ಪಿಸಿದರೆ, ಕೆ.ಆರ್. ಸರ್ಕಲ್ ನಿಲ್ದಾಣವು ‘ನೇರಳೆ ಮಾರ್ಗ’ದ ಸೆಂಟ್ರಲ್ ಕಾಲೇಜು ನಿಲ್ದಾಣಕ್ಕೆ ಅತ್ಯಂತ ಸಮೀಪವಿರಲಿದೆ. ಇದರಿಂದ ಮೆಜೆಸ್ಟಿಕ್, ವೈಟ್‌ಫೀಲ್ಡ್ ಹಾಗೂ ಚಲ್ಲಘಟ್ಟ ಭಾಗಗಳಿಗೆ ಸುಲಭವಾಗಿ ಹೋಗಬಹುದು.
ರೈಲು ಮತ್ತು ಬಿಎಂಟಿಸಿ ಸಂಪರ್ಕ: ಕಾರ್ಮೆಲಾ ರಾಮ್‌ನಲ್ಲಿ ಉಪನಗರ ರೈಲಿನ ‘ಕನಕ ಮಾರ್ಗ’ (ಹೀಲಲಿಗೆ-ರಾಜಾನುಕುಂಟೆ) ಹಾಗೂ ಕುಮಾರ ಪಾರ್ಕ್‌ನಲ್ಲಿ ಪಾರಿಜಾತ ಮಾರ್ಗದ ಜೊತೆ ಇಂಟರ್‌ಚೇಂಜ್ ಸೌಲಭ್ಯ ಇರಲಿದೆ. ಶಾಂತಿನಗರ ಮತ್ತು ಸರ್ಜಾಪುರದಲ್ಲಿ ಬಿಎಂಟಿಸಿ ಬಸ್ ಟರ್ಮಿನಲ್ ಜೊತೆ ಮೆಟ್ರೋ ಮಾರ್ಗ ಸಂಧಿಸಲಿದೆ.
ಹೆಬ್ಬಾಳದಲ್ಲಿ ಸೃಷ್ಟಿಯಾಗಲಿದೆ ‘ಮೆಗಾ ಟ್ರಾನ್ಸಿಟ್ ಹಬ್’:
ಹೆಬ್ಬಾಳದಲ್ಲಿ ಕೆಂಪು ಮಾರ್ಗದ ಜೊತೆಗೆ ಕೆ.ಆರ್.ಪುರ-ವಿಮಾನ ನಿಲ್ದಾಣ (ನೀಲಿ 2 ‘ಬಿ’) ಹಾಗೂ ಜೆಪಿ ನಗರ-ಕೆಂಪಾಪುರ (3ನೇ ಹಂತ) ಮಾರ್ಗಗಳೂ ಒಂದಾಗಲಿವೆ. ಇದಲ್ಲದೆ, ಹೆಬ್ಬಾಳ ರೈಲ್ವೇ ನಿಲ್ದಾಣ ಹಾಗೂ ‘ಮಲ್ಲಿಗೆ ಉಪನಗರ ರೈಲು ಮಾರ್ಗ’ ಕೂಡ ಇಲ್ಲಿಯೇ ಸಿಗುವುದರಿಂದ ಹೆಬ್ಬಾಳವು ನಗರದ ಬೃಹತ್ ಇಂಟರ್ ಮಾಡಲ್ ಟ್ರಾನ್ಸಿಟ್ ಹಬ್ ಆಗಿ ಹೊರಹೊಮ್ಮಲಿದೆ.
ಕೇಂದ್ರದಿಂದ ಅನುಮೋದನೆ ಗಡುವು ಇಲ್ಲ:
2033ರ ವೇಳೆಗೆ ಈ ಮಾರ್ಗವನ್ನು ಮುಕ್ತಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆಯಾದರೂ, ಯೋಜನೆಗೆ ಕೇಂದ್ರ ಸರ್ಕಾರದ ಅಂತಿಮ ಒಪ್ಪಿಗೆ ಸಿಗಬೇಕಿದೆ.
ರಾಜ್ಯಸಭೆಯಲ್ಲಿ ಸಂಸದ ಅಜಯ್ ಮಾಕನ್ ಅವರ ಪ್ರಶ್ನೆಗೆ ಉತ್ತರಿಸಿರುವ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, “ಯೋಜನೆಯ ಡಿಪಿಆರ್ ಸಲ್ಲಿಕೆಯಾಗಿದೆ. ಆದರೆ ಮೆಟ್ರೋ ಯೋಜನೆಗಳು ಹೆಚ್ಚಿನ ಬಂಡವಾಳ ವೆಚ್ಚವನ್ನು ಒಳಗೊಂಡಿರುವುದರಿಂದ, ಮೆಟ್ರೋ ರೈಲು ನೀತಿ 2017ರ ಅಡಿಯಲ್ಲಿ ಸಮಗ್ರ ಪರಿಶೀಲನೆ ನಡೆಯಬೇಕಿದೆ. ಹೀಗಾಗಿ ಯೋಜನೆ ಅನುಮೋದನೆಗೆ ಯಾವುದೇ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.

