ಬಿಹಾರದ ಸುಪೌಲ್ ಜಿಲ್ಲೆಯ ರೈತನೊಬ್ಬ ಭತ್ತದ ಗದ್ದೆಯಲ್ಲಿ ಕಂಡುಬಂದ ಸುಮಾರು ಐದು ಅಡಿ ಉದ್ದದ ಜೀವಂತ ಮೊಸಳೆಯನ್ನು ರಕ್ಷಿಸಿ, ಅದನ್ನು ತನ್ನ ಹೆಗಲ ಮೇಲೆ ಹೊತ್ತು ಪೊಲೀಸ್ ಠಾಣೆಗೆ ಕೊಂಡೊಯ್ದ ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು. ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಅಪರೂಪದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡ ಸುಮಾರು 5 ಅಡಿ ಉದ್ದದ ಮೊಸಳೆಯನ್ನು ರಕ್ಷಿಸಿದ ರೈತನೊಬ್ಬ, ಅರಣ್ಯ ಇಲಾಖೆ ಸಿಬ್ಬಂದಿ ಸಿಗದ ಕಾರಣ ಅದನ್ನು ತನ್ನ ಹೆಗಲ ಮೇಲೆ ಹೊತ್ತು ನೇರವಾಗಿ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾನೆ. ಈ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿಗಳ ಪ್ರಕಾರ, ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ಮೊಸಳೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತು. ಆದರೆ ಅದನ್ನು ಹಾನಿಗೊಳಿಸದೇ ಸುರಕ್ಷಿತವಾಗಿ ರಕ್ಷಿಸಲು ಗ್ರಾಮಸ್ಥರು ಮುಂದಾದರು. ರೈತ ಅಮಿತ್ ಕುಮಾರ್ ಮತ್ತು ಇತರರು ಮೊಸಳೆಯ ಬಾಯಿಯನ್ನು ಹಗ್ಗದಿಂದ ಕಟ್ಟಿ ನಿಯಂತ್ರಣಕ್ಕೆ ತಂದರು. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಲಭ್ಯವಾಗದ ಕಾರಣ, ಅಮಿತ್ ಕುಮಾರ್ ಮೊಸಳೆಯನ್ನು ತನ್ನ ಹೆಗಲ ಮೇಲೆ ಹೊತ್ತು ಮೊದಲು ಅರಣ್ಯ ಇಲಾಖೆಯ ಕಚೇರಿಗೆ ತೆರಳಿದರು. ಅಲ್ಲಿ ಯಾರೂ ಇಲ್ಲದಿದ್ದರಿಂದ, ಬಳಿಕ ಭೀಮನಗರ ಪೊಲೀಸ್ ಠಾಣೆಗೆ ಅದನ್ನು ಕೊಂಡೊಯ್ದರು. ಈ ದೃಶ್ಯವನ್ನು ಕಂಡ ಸಾರ್ವಜನಿಕರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ಕ್ಷಣಾರ್ಧದಲ್ಲಿ ವೈರಲ್ ಆಯಿತು.
ಪೊಲೀಸರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಠಾಣೆಗೆ ಆಗಮಿಸಿ ಮೊಸಳೆಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. ವೈದ್ಯಕೀಯ ತಪಾಸಣೆಯ ನಂತರ ಅದು ಆರೋಗ್ಯವಾಗಿರುವುದು ದೃಢಪಟ್ಟಿದ್ದು, ಬಳಿಕ ಅದನ್ನು ಕೋಸಿ ನದಿಗೆ ಸುರಕ್ಷಿತವಾಗಿ ಬಿಡಲಾಯಿತು. ಮಳೆಗಾಲದಲ್ಲಿ ನೀರಿನ ಮಟ್ಟ ಏರಿಕೆಯಾಗುವುದರಿಂದ ಮೊಸಳೆ ಸೇರಿದಂತೆ ಕಾಡುಪ್ರಾಣಿಗಳು ಗ್ರಾಮಗಳತ್ತ ಬರುವ ಘಟನೆಗಳು ಹೆಚ್ಚಾಗುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೊಸಳೆಯನ್ನು ತಮ್ಮ ವಶಕ್ಕೆ ಪಡೆದು, ಆರೋಗ್ಯ ತಪಾಸಣೆಯ ಬಳಿಕ ಸುರಕ್ಷಿತವಾಗಿ ಕೋಸಿ ನದಿಗೆ ಬಿಟ್ಟಿದ್ದಾರೆ. ಅಪಾಯಕಾರಿ ಪ್ರಾಣಿಯನ್ನು ಹಾನಿಗೊಳಿಸದೆ ಸುರಕ್ಷಿತವಾಗಿ ರಕ್ಷಿಸಿದ ರೈತನ ಧೈರ್ಯ ಮತ್ತು ಜವಾಬ್ದಾರಿಯುತ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

