ಗ್ಲ್ಯಾಸ್ಗೋದಲ್ಲಿ ನಡೆದ ೨೦೨೬ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಒಟ್ಟು ೩೯ ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ೪ನೇ ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ಈ ಯಶಸ್ವಿ ಪಯಣವನ್ನು ಟೀಮ್ ಇಂಡಿಯಾ ಟಿ೨೦ ಹಾಗೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ಬಾರಿಯ ಕೂಟದಲ್ಲಿ ಭಾರತ ೧೩ ಚಿನ್ನ, ೧೭ ಬೆಳ್ಳಿ ಹಾಗೂ ೯ ಕಂಸ್ಯ ಪದಕಗಳನ್ನು ತನ್ನದಾಗಿಸಿಕೊಂಡಿದೆ. ವಿಶೇಷವಾಗಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತೀಯ ಸ್ಪರ್ಧಿಗಳು ಐತಿಹಾಸಿಕ ಸಾಧನೆ ಮಾಡಿದ್ದು, ಗರಿಷ್ಠ ಪದಕಗಳನ್ನು ತಂದುಕೊಟ್ಟಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್, ಜೂಡೋ ಮತ್ತು ಪ್ಯಾರಾ ಕ್ರೀಡೆಗಳಲ್ಲೂ ಕ್ರೀಡಾಪಟುಗಳು ಗಮನಾರ್ಹ ಪ್ರದರ್ಶನ ತೋರಿದ್ದಾರೆ.
ಭಾರತದ ಸಾಧನೆಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂತಸ ವ್ಯಕ್ತಪಡಿಸಿರುವ ಶ್ರೇಯಸ್ ಅಯ್ಯರ್, “ಟೀಮ್ ಇಂಡಿಯಾಗೆ ಇದು ಅದ್ಭುತ ಕಾಮನ್‌ವೆಲ್ತ್ ಕ್ರೀಡಾಕೂಟ. ನಮ್ಮ ಬಾಕ್ಸರ್‌ಗಳು ಗ್ಲ್ಯಾಸ್ಗೋದಲ್ಲಿ ಪ್ರಾಬಲ್ಯ ಮೆರೆದು ಚಿನ್ನದ ಪದಕಗಳನ್ನು ತಂದುಕೊಡುವ ಮೂಲಕ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ದೇಶಕ್ಕೆ ಸ್ಪೂರ್ತಿಯಾದ ನಮ್ಮ ಎಲ್ಲಾ ಚಾಂಪಿಯನ್ನರು ಮತ್ತು ಪ್ಯಾರಾ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಇದು ಭಾರತೀಯ ಕ್ರೀಡೆಯ ಶ್ರೇಷ್ಠ ಕ್ಷಣ. ತ್ರಿವರ್ಣ ಧ್ವಜವನ್ನು ಪ್ರತಿನಿಧಿಸಿದ ಪ್ರತಿಯೊಬ್ಬ ಅಥ್ಲೀಟ್ ಬಗ್ಗೆಯೂ ಹೆಮ್ಮೆಯಿದೆ” ಎಂದು ಬರೆದುಕೊಂಡಿದ್ದಾರೆ.
ಗ್ಲ್ಯಾಸ್ಗೋದಲ್ಲಿ ಯಶಸ್ವಿ ಅಭಿಯಾನ ಮುಗಿಸಿರುವ ಭಾರತೀಯ ಕ್ರೀಡಾಪಟುಗಳು, ಇದೀಗ ಮುಂಬರುವ ಅಂತಾರಾಷ್ಟ್ರೀಯ ಪಂದ್ಯಾವಳಿಗಳು ಹಾಗೂ ೨೦೩೦ರಲ್ಲಿ ಅಹಮದಾಬಾದ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕೂಟದ ತಯಾರಿಯತ್ತ ಗಮನ ಹರಿಸಿದ್ದಾರೆ.
What a Commonwealth Games for Team India! 🇮🇳
Our boxers dominated Glasgow, bringing home a haul of gold and making the nation proud. Huge congratulations to all our champions and para trailblazers for inspiring the nation. This is Indian sport at its finest.
Proud of every…— Shreyas Iyer (@ShreyasIyer15) August 2, 2026

