ಬೆಂಗಳೂರು: ಗೇ ಡೇಟಿಂಗ್ ಆ್ಯಪ್‌ಗಳ ಮೂಲಕ ಅಮಾಯಕರನ್ನು ಬೆದರಿಸಿ ನಗನಾಣ್ಯ ದೋಚಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಎರಡು ತಿಂಗಳ ಹಿಂದೆ ಗ್ರೈಂಡರ್ ಗೇ ಆ್ಯಪ್ ಮೂಲಕ ಯುವಕನನ್ನು ಪರಿಚಯಿಸಿಕೊಂಡಿದ್ದ ಆರೋಪಿಗಳು ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಸಮೀಪದ ವಾಸವಿ ಬಡಾವಣೆ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಹಲ್ಲೆ ನಡೆಸಿ ಹಣ ದೋಚಿದ್ದರು. ಪ್ರಕರಣ ಸಂಬಂಧ ಜಿಗಣಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆನೇಕಲ್ ಪಟ್ಟಣದ ನಿವಾಸಿಗಳಾಗಿದ್ದ ವಿಶಾಲ್, ಅಜಯ್, ಸಂಜಯ್ ಮತ್ತು ಸೂರ್ಯ ಬಂಧಿತ ಆರೋಪಿಗಳು. ಉಳಿದ ಇಬ್ಬರು ಆರೋಪಿಗಳು ಅಪ್ರಾಪ್ತರಾಗಿದ್ದು, ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕು ಬನವಾಸಿ ನಿವಾಸಿಯಾದ ದೂರುದಾರ, ನನಗೆ ಮೊಬೈಲ್‌ನಲ್ಲಿ Grinder App ಅನ್ನು ಉಪಯೋಗಿಸುವ ಅಭ್ಯಾಸವಿತ್ತು. ಚಾಟಿಂಗ್ ವೇಳೆ ಒಬ್ಬ ವ್ಯಕ್ತಿ ನನಗೆ ಸಿಗೋಣವೆಂದು ಹೇಳಿ ಕಲ್ಲುಬಾಳು ಗ್ರಾಮದಲ್ಲಿರುವ ವಾಸವಿ ಲೇಔಟ್‌ಗೆ ಬರುವಂತೆ ತಿಳಿಸಿದ್ದ. ಅಲ್ಲಿಗೆ ಹೋದಾಗ ಬೈಕ್‌ನಲ್ಲಿ ನನ್ನನ್ನು ನೀಲಗಿರಿ ತೋಪಿಗೆ ಕರೆದುಕೊಂಡು ಹೋದ. ಅಲ್ಲಿ ಆಗಲೇ ಮೂರು ಜನ ಅಪರಿಚಿತ ವ್ಯಕ್ತಿಗಳು ಇದ್ದರು. ನನ್ನನ್ನು ಸುತ್ತುವರಿದು ಬಿಯರ್ ಬಾಟಲಿ ತೋರಿಸಿ ಸಾಯಿಸುವುದಾಗಿ ಬೆದರಿಸಿದರು. ಮೊಬೈಲ್‌ನಲ್ಲಿದ್ದ 45,000 ಹಣವನ್ನು ಗೂಗಲ್ ಪೇ ಮೂಲಕ ವರ್ಗಾವಣೆ ಮಾಡಿಕೊಂಡು, ಕೈನಲ್ಲಿದ್ದ ಚಿನ್ನದ ಉಂಗುರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ವ್ಯಕ್ತಿ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.
ಪ್ರಕರಣ ದಾಖಲಿಸಿಕೊಂಡು ಜಿಗಣಿ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳು ನಕಲಿ ಖಾತೆಗಳನ್ನು ಸೃಷ್ಟಿಸಿ ಗೇ ಆ್ಯಪ್‌ಗಳಲ್ಲಿ ಯುವಕರನ್ನು ಸಂಪರ್ಕಿಸುತ್ತಿದ್ದರು. ಬಳಿಕ ಸ್ನೇಹ ಬೆಳೆಸಿ ಅವರ ವಿಶ್ವಾಸಗಳಿಸಿದ ನಂತರ ಸಲಿಂಗ ಸಂಬಂಧದ ನೆಪದಲ್ಲಿ ಆನೇಕಲ್ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಿಗೆ ಭೇಟಿ ನೀಡಲು ಆಹ್ವಾನಿಸುತ್ತಿದ್ದರು. ಸ್ಥಳಕ್ಕೆ ಬಂದ ಬಳಿಕ ಯುವಕರನ್ನು ಬೆದರಿಸಿ ಹಣ, ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದರು ಎಂಬುದು ತಿಳಿದುಬಂದಿದೆ.

