ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ವ್ಯಾಪ್ತಿಯಲ್ಲಿ ಪಂಪ್ ಸೆಟ್ ಗಳ ಕೇಬಲ್ ಕಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಹೊಳೆಹೊನ್ನೂರು ಸಮೀಪದ ಭದ್ರಾಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪಂಪ್ಸೆಟ್ ಕೇಬಲ್ ಕಳವು ಮಾಡುತ್ತಿದ್ದ ಇಬ್ಬರನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ವಿದ್ಯಾನಗರದ ಎಸ್. ತೇಜಸ್ ಮತ್ತು ಭದ್ರಾವತಿ ತಾಲೂಕು ಮಲ್ಲಿಗೆನಹಳ್ಳಿ ಅನಿಲ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 1.10 ಲಕ್ಷ ರೂಪಾಯಿ ಮೌಲ್ಯದ ಕೇಬಲ್ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಪಂಪ್ಸೆಟ್ ಕೇಬಲ್ ಗಳನ್ನು ಕಳವು ಮಾಡಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪಂಪ್ಸೆಟ್ ಕೇಬಲ್ ಕಳವು
ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೇಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಾವಿಗೆ ಅಳವಡಿಸಿದ್ದ ಪಂಪ್ಸೆಟ್ ಮತ್ತು ಕೇಬಲ್ ಕಳವು ಮಾಡಲಾಗಿದೆ.
ಶಾಲೆಗೆ ಕುಡಿಯುವ ನೀರಿನ ಬಳಕೆಗೆ ಬಾವಿಗೆ ಅಳವಡಿಸಲಾಗಿದ್ದ ಸಬ್ ಮರ್ಸಿಬಲ್ ಪಂಪ್ಸೆಟ್ ಜುಲೈ 30 ರಂದು ಸುಟ್ಟು ಹೋಗಿದ್ದು, ದುರಸ್ತಿಗೆ ನೀಡಲಾಗಿತ್ತು. ಈ ಪಂಪ್ಸೆಟ್ ಗೆ ಅಳವಡಿಸಿದ್ದ ಪಂಪ್ ಮತ್ತು ಕೇಬಲ್ ಅನ್ನು ಶಾಲೆಯ ಆವರಣದಲ್ಲಿ ಇಡಲಾಗಿತ್ತು. ಇದನ್ನು ಗಮನಿಸಿದ ಕಳ್ಳರು ವಿದ್ಯುತ್ ಕೇಬಲ್ ಮತ್ತು ಪಂಪ್ ಕಳವು ಮಾಡಿದ್ದಾರೆ. ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

