ಮೈಸೂರು: ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಬೂದಹಳ್ಳಿಯಲ್ಲಿ ಶನಿವಾರ ಇಟ್ಟಿಗೆ ಗುಂಡು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ರಾಜೇಶ್(32), ನಾಗರಾಜ್(62), ನಾರಾಯಣ(63) ಮೃತಪಟ್ಟ ಕಾರ್ಮಿಕರು ಎಂದು ಗುರುತಿಸಲಾಗಿದೆ. ಬೂದಹಳ್ಳಿ ಗ್ರಾಮದ ಸಿದ್ದರಾಜು ಅವರಿಗೆ ಸೇರಿದ ಇಟ್ಟಿಗೆ ಗೂಡಿನಲ್ಲಿ ಸುಡಲು ಹಾಕಿದ್ದ ಬೆಂಕಿಯನ್ನು ಪೂರ್ಣ ಪ್ರಮಾಣದಲ್ಲಿ ನಂದಿಸುವ ಮೊದಲೇ ಇಟ್ಟಿಗೆ ಗೂಡು ಬಿಚ್ಚಿದ್ದಾರೆ. ಆಗ ಗೂಡು ಕಾರ್ಮಿಕರ ಮೇಲೆ ಕುಸಿದಿದೆ. ರಾಜೇಶ್ ಮತ್ತು ನಾರಾಯಣ ಅವರು ತೀವ್ರ ಸುಟ್ಟ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

