ಬೆಂಗಳೂರು: ರಾಜ್ಯದ ಸುಮಾರು 7 ಸಾವಿರ ವಿದ್ಯಾರ್ಥಿಗಳಿಗೆ ಹೆಚ್ಐವಿ ಸೋಂಕು ತಗಲಿದೆ ಎನ್ನುವ ಮಾಹಿತಿ ಶುದ್ಧ ಸುಳ್ಳು, ಇದು ತಪ್ಪು ಮಾಹಿತಿಯಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟನೆ ನೀಡಿದ್ದಾರೆ.
ಆರೋಗ್ಯ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಖಾದರ್, ರಾಜ್ಯದ 7000 ವಿದ್ಯಾರ್ಥಿಗಳಿಗೆ ಹೆಚ್ಐವಿ ಸೋಂಕು ತಗುಲಿದೆ. ಸರ್ಕಾರ ಕಾಲೇಜುಗಳಲ್ಲಿ ಹೆಚ್ಐವಿ ಪರೀಕ್ಷೆ ಕಡ್ಡಾಯಗೊಳಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
2026ರ ಏಪ್ರಿಲ್ ನಿಂದ ಜೂನ್ ವರೆಗೆ ಮೂರು ತಿಂಗಳ ಅವಧಿಯಲ್ಲಿ 3202 ಹೆಚ್ಐವಿ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. 2004 ರಿಂದ ಇದುವರೆಗೂ 39,028 ಹೆಚ್ಐವಿ ಸೋಂಕಿತರು 18ರಿಂದ 35 ವಯೋಮಾನದವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೆಚ್ಐವಿ ತಡೆ ಉದ್ದೇಶದಿಂದ ಮೊಬೈಲ್ ಸುರಕ್ಷಾ ಕಾರ್ಯಕ್ರಮ, ಹೆಚ್ಐವಿ ಏಡ್ಸ್ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಎಂಟು ತಿಂಗಳ ರೆಡ್ ರಿಬ್ಬನ್ ಜಾಗೃತಿ ಅಭಿಯಾನದಲ್ಲಿ ಪ್ರತಿ ತಿಂಗಳು ವಿವಿಧ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

