ಧಾರವಾಡ: ವಿವಿಧ ಸೌಲಭ್ಯ, ಬರ ಪರಿಹಾರ ಮತ್ತು ಸಬ್ಸಿಡಿಗಳಿಗೆ ರೈತರ ಗುರುತಿನ ಸಂಖ್ಯೆ(ಎಫ್‍ಐಡಿ) ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರತಿ ವಾರ ಸಭೆಗಳನ್ನು ಜರುಗಿಸಿ, ಮುಂಗಾರು ಹಂಗಾಮಿನ ಮಳೆಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಕೃಷಿ ಚಟುವಟಿಕೆಗಳು ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ 2026 ನೇ ಮುಂಗಾರು ಹಂಗಾಮಿನ 1ನೇ ಜೂನನಿಂದ 31 ನೇ ಜುಲೈವರೆಗೆ ವಾಡಿಕೆ ಮಳೆ 275.1 ಮೀ.ಮೀ ಆಗಬೇಕಾಗಿದ್ದು ವಾಸ್ತವ 178.7 ಮೀ.ಮೀ ಮಳೆಯಾಗಿದ್ದು ಶೇ-35 ರಷ್ಟು ಮಳೆ ಪ್ರಮಾಣ ಕೊರತೆಯಾಗಿರುತ್ತದೆ.
ಧಾರವಾಡ ಜಿಲ್ಲೆಯ ರೈತರು ಸರ್ಕಾರದ ವಿವಿಧ ಸವಲತ್ತುಗಳನ್ನು, ಬರ ಪರಿಹಾರ ಮತ್ತು ಸಬ್ಸಿಡಿಗಳನ್ನು ಪಡೆಯಲು ರೈತರು ತಮ್ಮ ಪ್ರತಿವೊಂದು ಸರ್ವೆ ನಂಬರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿ, ರೈತರ ಗುರುತಿನ ಸಂಖ್ಯೆ (ಎಫ್‍ಐಡಿ) ಪಡೆಯುವುದು ಕಡ್ಡಾಯವಾಗಿದೆ.
ರೈತರು ನೋಂದಣಿ ಮಾಡಿಸಲು ಪ್ರಮುಖ ದಾಖಲೆಗಳ ವಿವರ: ಆಧಾರ್ ಕಾರ್ಡ್ ನಕಲು ಪ್ರತಿ, ಆಧಾರ್ ಕಾರ್ಡ್‍ಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆ (ಒಟಿಪಿ ಪರಿಶೀಲನೆಗಾಗಿ). ಇತ್ತೀಚಿನ ಪಹಣಿ (ಆರ್‍ಟಿಸಿ): ಜಮೀನಿನ ಸರ್ವೇ ನಂಬರ್, ಹಿಸ್ಸಾ ನಂಬರ್ ಒಳಗೊಂಡ ಭೂ ದಾಖಲೆಗಾಗಿ. ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ: ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‍ಎಸ್‍ಸಿ ಕೋಡ್ ಸ್ಪಷ್ಟವಾಗಿರಬೇಕು (ನೇರ ನಗದು ವರ್ಗಾವಣೆಗಾಗಿ). ಪಾಸ್ ಪೋರ್ಟ್ ಅಳತೆಯ ರೈತರ ಇತ್ತೀಚಿನ ಫೋಟೋ.
ಜಾತಿ ಪ್ರಮಾಣ ಪತ್ರ: ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಾಗಿದ್ದರೆ ಸಬ್ಸಿಡಿ ಸವಲತ್ತುಗಳಿಗಾಗಿ ಸಲ್ಲಿಸಬೇಕು. ಕುಟುಂಬದ ರೇಷನ್ ಕಾರ್ಡ್ (ಪಡಿತರ ಚೀಟಿ): ಕುಟುಂಬದ ವಿವರಗಳ ಹೊಂದಾಣಿಕೆಗಾಗಿ.
ರೈತರು ತಮ್ಮ ಹತ್ತಿರದ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇಷ್ಮೆ ಅಥವಾ ಪಶುಸಂಗೋಪನಾ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ, ಎಫ್‍ಐಡಿ ಯನ್ನು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

