ಮೈಸೂರು: ಪ್ರಧಾನಿ ನರೇಂದ್ರ ಮೋದಿ ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಡಗರ ಸಂಭ್ರಮದ ನಡುವೆ ಭಾರಿ ಬಿಗಿ ಭದ್ರತೆ ಕೂಡ ಕೈಗೊಳ್ಳಲಾಗಿದೆ.
1892 ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ನೆನಪಿನಲ್ಲಿ ನಿರ್ಮಿಸಲಾಗಿರುವ ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರ’ (ವಿವೇಕ ಸ್ಮಾರಕ) ವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿದ್ದು, ಅವರ ಪ್ರವಾಸದ ವೇಳಾಪಟ್ಟಿ ಹೀಗಿದೆ:
ಮಧ್ಯಾಹ್ನ 2:55: ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಪ್ರಧಾನಿ ಆಗಮಿಸಲಿದ್ದಾರೆ.
ಮಧ್ಯಾಹ್ನ 3:15: ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಓವಲ್ ಮೈದಾನಕ್ಕೆ ತಲುಪಲಿದ್ದಾರೆ.
ಮಧ್ಯಾಹ್ನ 3:25: ಓವಲ್ ಮೈದಾನದಿಂದ ರಸ್ತೆ ಮಾರ್ಗವಾಗಿ ವಿವೇಕ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ 3:30 – ಸಂಜೆ 5:15: ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರ ಹಾಗೂ ವಿವೇಕ ಸ್ಮಾರಕ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ 5:20: ರಾಮಕೃಷ್ಣ ಆಶ್ರಮದ ಶಾಲೆಗೆ ಭೇಟಿ ನೀಡಲಿದ್ದಾರೆ.
ಸಂಜೆ 5:55: ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸಾಗಲಿದ್ದಾರೆ.
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಅವರು ಇಂದು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಈ ಪ್ರವಾಸದಲ್ಲಿ ಅವರು ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುವುದರ ಜೊತೆಗೆ, ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಧಿಕೃತವಾಗಿ ಸ್ವಾಗತಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
12 ರಸ್ತೆಗಳಲ್ಲಿ ಸಂಚಾರ ಬಂದ್: ಪರ್ಯಾಯ ಮಾರ್ಗಗಳು
ಪ್ರಧಾನಿ ಮೋದಿ ಮೈಸೂರು ಭೇಟಿ ಹಿನ್ನೆಲೆಯಲ್ಲಿ ನಗರದ 12 ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಕೆ.ಆರ್.ಬಿ ರಸ್ತೆ (ಡಿಸಿ ಆಫೀಸ್ನಿಂದ ಏಕಲವ್ಯ ಸರ್ಕಲ್), ಬೋಗಾದಿ ರಸ್ತೆ (ಮುಡಾ ಜಂಕ್ಷನ್ನಿಂದ ಡಾ.ಪದ್ಮ ವೃತ್ತ), ಪಡುವಾರಹಳ್ಳಿ ಜಂಕ್ಷನ್ನಿಂದ ಮೆಟ್ರೋಪೋಲ್ ಸರ್ಕಲ್, ಜೆ.ಎಲ್.ಬಿ ರಸ್ತೆ, ರಮಾವಿಲಾಸ ರಸ್ತೆ, ಕೃಷ್ಣವಿಲಾಸ ರಸ್ತೆ ಹಾಗೂ ದಿವಾನ್ಸ್ ರಸ್ತೆಗಳು.
ಪರ್ಯಾಯ ಮಾರ್ಗಗಳು:
ಹುಣಸೂರು ರಸ್ತೆ ಹಾಗೂ ವಿಜಯನಗರ ಕಡೆಯಿಂದ ಬರುವವರು ಗೋಕುಲಂ ರಸ್ತೆ, ಪಂಚವಟಿ, ಜಾವಾ ರಸ್ತೆ ಹಾಗೂ ಆಯುರ್ವೇದಿಕ್ ವೃತ್ತದ ಮೂಲಕ ನಗರ ಪ್ರವೇಶಿಸಬೇಕು. ಅಗ್ರಹಾರ, ಜೆ.ಪಿ.ನಗರ ಕಡೆಯಿಂದ ಬಸ್ ನಿಲ್ದಾಣಕ್ಕೆ ತೆರಳುವವರು ಸಿದ್ದಪ್ಪ ಸ್ಕ್ವೇರ್, ಎಂ.ಜಿ.ರಸ್ತೆ ಅಂಡರ್ ಬ್ರಿಡ್ಜ್ ಹಾಗೂ ಜಿ.ಎನ್.ರಸ್ತೆ ಮಾರ್ಗವಾಗಿ ತೆರಳಲು ಸೂಚಿಸಲಾಗಿದೆ.

