ಮಂಡ್ಯ-ಮಂಡ್ಯ ತಾಲ್ಲೂಕಿನ ಹಟ್ನ ಬೇವುಕಲ್ಲು ಗ್ರಾಮದಲ್ಲಿ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ತೀವ್ರ ಅಘಾತ ವ್ಯಕ್ತಪಡಿಸಿರುವ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಶುಕ್ರವಾರ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಇನ್ನಿತರ ಮುಖಂಡರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಪುಟ್ಟಸ್ವಾಮಿ ಅವರ ಮನೆಗೆ ಆಗಮಿಸಿದ ಸಚಿವರು; ವೃದ್ಧ ತಾಯಿ, ಮಕ್ಕಳು, ಮೊಮ್ಮಕ್ಕಳಿಗೆ ಸಾಂತ್ವನ ಹೇಳಿ ನೆರವಿನ ಹಸ್ತ ಚಾಚಿದರು.
ಸಾಲದ ಒತ್ತಡದಿಂದ ದಂಪತಿ ಆತ್ಮಹತ್ಯೆ
ಕೃಷಿ ಬೆಳೆಗಳನ್ನು ಇಡುವುದಕ್ಕಾಗಿ ಬ್ಯಾಂಕ್ ಮತ್ತು ವಿವಿಧ ಖಾಸಗಿ ಮೂಲಗಳಿಂದ ಪುಟ್ಟಸ್ವಾಮಿ ಅವರು ಸಾಲ ಮಾಡಿದ್ದರು. ಸಾಲಗಾರರ ಒತ್ತಡದಿಂದ ತೀವ್ರ ಕಂಗೆಟ್ಟಿದ್ದ ಅವರು ತಮ್ಮ ಪತ್ನಿ ನಾಗಮ್ಮ ಅವರೊಂದಿಗೆ ಗುರುವಾರ ನೇಣಿಗೆ ಶರಣಾಗಿದ್ದರು. ತಮ್ಮ ತಾಯಿಯ 11ನೇ ದಿನದ ಉತ್ತರ ಕ್ರಿಯಾದಿ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದ ಸಚಿವರಿಗೆ ಗುರುವಾರ ತಿಳಿದು ಅವರು ಅತೀವ ದುಃಖ ವ್ಯಕ್ತಪಡಿಸಿದ್ದರು.
ಬೆಳಗ್ಗೆ ಹಾಸನದಿಂದ ನೇರವಾಗಿ ಮಂಡ್ಯ ತಾಲೂಕಿನ ಹಟ್ನ ಬೇವುಕಲ್ಲು ಗ್ರಾಮಕ್ಕೆ ಬಂದ ಸಚಿವರು, ವಿಶೇಷವಾಗಿ ಪುಟ್ಟಸ್ವಾಮಿ ಅವರ ವೃದ್ಧ ತಾಯಿಯವರಿಗೆ ಧೈರ್ಯ ಹೇಳಿದರು. ಅವರ ಪುತ್ರ ಸ್ವಾಮಿ ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ನಿಮ್ಮ ಜತೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು. ಅಲ್ಲದೆ, ಈ ಕುಟುಂಬಕ್ಕೆ ಅಗತ್ಯ ನೆರವು ಒದಗಿಸುವ ಸಂಬಂಧ ಪುಟ್ಟರಾಜು ಅವರೊಂದಿಗೆ ಚರ್ಚಿಸಿದರು.
ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಸೂಚನೆ
ಅಲ್ಲದೆ ದಂಪತಿಯ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಸಚಿವರು ಮೃತ ಪುಟ್ಟಸ್ವಾಮಿ ಅವರ ಪುತ್ರ ಸ್ವಾಮಿ ಅವರಿಂದ ಮಾಹಿತಿ ಪಡೆದುಕೊಂಡರು. ಈ ಸಂಬಂಧ ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳ ಜತೆ ಸಚಿವರು ಮಾತನಾಡಿ, ದುಃಖತಪ್ತ ಕುಟುಂಬಕ್ಕೆ ಸಿಗಬೇಕಾದ ಎಲ್ಲ ಪರಿಹಾರಗಳನ್ನು ಒದಗಿಸುವಂತೆ ಸೂಚಿಸಿದರು.
ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಪುಟ್ಟಸ್ವಾಮಿಯವರ ಪುತ್ರ ಸ್ವಾಮಿಗೆ ಹೇಳಿದ ಸಚಿವರು, ಏನೇ ಸಮಸ್ಯೆ ಬಂದರೂ ತಮ್ಮನ್ನು ಭೇಟಿ ಆಗುವಂತೆ ತಿಳಿಸಿದರು.
ಮಳೆ ಕೊರತೆ ಮತ್ತು ಸಾಲ: ಗ್ರಾಮಸ್ಥರ ಮಾಹಿತಿ
ದಂಪತಿ ಸುಮಾರು ಐದು ಎಕರೆ ಜಮೀನು ಹೊಂದಿದ್ದರು. ವಿವಿಧ ಕಾರಣಗಳಿಗೆ ಕೈಸಾಲ ಮಾಡಿಕೊಂಡಿದ್ದರು. ಈ ಬಾರಿ ಮಳೆ ಕೊರತೆಯಿಂದ ಬೆಳೆ ಇಲ್ಲದ ಕಾರಣ ಬೆಳೆ ನಷ್ಟ, ಮತ್ತೊಂದೆಡೆ ಸಾಲಗಾರರ ಕಾಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಸಚಿವರಿಗೆ ತಿಳಿಸಿದರು.
ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಹೋಗಬಾರದು. ಏನೇ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸಬೇಕು. ತಮ್ಮನ್ನು ನಂಬಿದ ಜನ ಇರುತ್ತಾರೆ ಎನ್ನುವುದು ಮರೆಯಬಾರದು ಎಂದು ಸಚಿವರು ಮನವಿ ಮಾಡಿದರು.

