ದಾವಣಗೆರೆ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪರಿಶೀಲನೆ ಕಾರ್ಯವು ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು, ಯಾವುದೇ ಜೀವಂತ ಹಾಗೂ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಸ್ಪಷ್ಟಪಡಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 7,086 ಮತದಾರರಿಗೆ ನೋಟಿಸ್ ನೀಡಲಾಗಿದ್ದು, ಈ ಪೈಕಿ 6,733 ಮತದಾರರ ಸ್ವತಃ ಮರುಪರಿಶೀಲನೆ ಹಾಗೂ ವಿಚಾರಣೆ ಪೂರ್ಣಗೊಳಿಸಲಾಗಿದೆ. ವಿಚಾರಣೆ ನಡೆಸಿ, ಈಗಾಗಲೇ ಬೇರೆಡೆ ನೋಂದಣಿಯಾಗಿರುವ(ದ್ವಿಪ್ರತಿ/ಡೂಪ್ಲಿಕೇಟ್) ಹಾಗೂ 353 ವಿಚಾರಣೆಗೆ ಬಾಕಿ ಇದೆ. ವಿಚಾರಣೆ ನಡೆಸಿ ದ್ವಿಪ್ರತಿ, ಮರಣಹೊಂದಿದರವರ, ಸ್ಥಳಾಂತರಗೊಂಡ ಹಾಗೂ ಇತರೆ ಕಾರಣಗಳಿಂದ 112 ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.
ತಾಲ್ಲೂಕುವಾರು ವಿವರ:
ಜಗಳೂರು 59, ಹರಿಹರ: 18, ದಾವಣಗೆರೆ ಉತ್ತರ 15, ದಾವಣಗೆರೆ ದಕ್ಷಿಣ 14, ಹೊನ್ನಾಳಿ 03, ಚನ್ನಗಿರಿ 01, ಮಾಯಾಕೊಂಡ 00, 5 ಜನ ನೇಪಾಳಿ ಪ್ರಜೆಗಳು ಹಾಗೂ ಪ್ರಸ್ತುತ ದುಬೈನಲ್ಲಿರುವ ಓರ್ವ ಮತದಾರರನ್ನು ಹೊರತುಪಡಿಸಿ, ಯಾವುದೇ ಸಕ್ರಿಯ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿಲ್ಲ ಎಂದರು.
ಜಿಲ್ಲೆಯ ಎಲ್ಲಾ 7 ವಿಧಾನಸಭಾ ಕ್ಷೇತ್ರಗಳ ಇಆರ್‌ಒ(ERO – ಚುನಾವಣಾ ನೋಂದಣಾಧಿಕಾರಿ) ಹಾಗೂ ಬಿಎಲ್‌ಒಗಳಿಂದ ದೃಢೀಕರಣ ಪತ್ರ ಪಡೆಯಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ “ಬಲ್ಕ್ ಅರ್ಜಿಗಳು” ಸ್ವೀಕೃತಗೊಂಡಿಲ್ಲ ಎಂದು ತಿಳಿಸಿದರು.
ನಮೂನೆ 6, 6ಎ, 7 ಹಾಗೂ 8 ಸೇರಿದಂತೆ ಒಟ್ಟು 24,012 ಅರ್ಜಿಗಳು ಸ್ವೀಕೃತವಾಗಿವೆ. ಪರಿಶೀಲನೆ ನಂತರ 22,200 ಅರ್ಹ ಅರ್ಜಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಪ್ರಸ್ತುತ 2,142 ಅರ್ಜಿಗಳು ಪ್ರಕ್ರಿಯೆಯಲ್ಲಿದ್ದು (ಪೆಂಡಿಂಗ್), ಶೀಘ್ರದಲ್ಲೇ ವಿಲೇವಾರಿ ಮಾಡಲಾಗುವುದು. ಈ ಎಲ್ಲಾ ನಮೂನೆಗಳ ವಿಲೇವಾರಿಯನ್ನು ಅಧಿಕಾರಿಗಳು ಭೌತಿಕವಾಗಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ಆಧಾರ್ ಕಾರ್ಡ್ ಒಂದನ್ನೇ ಆಧಾರವಾಗಿಟ್ಟುಕೊಂಡು ಫಾರ್ಮ್-6 ಸ್ವೀಕರಿಸುವುದಿಲ್ಲ:
ಭಾರತ ಚುನಾವಣಾ ಆಯೋಗದ ನಿರ್ದೇಶನ ಹಾಗೂ ನಿಯಮಾವಳಿಗಳಂತೆ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು(ಫಾರ್ಮ್-6) ಕೇವಲ ಆಧಾರ್ ಕಾರ್ಡ್ ಒಂದನ್ನೇ ಪರಿಗಣಿಸಲು ಬರುವುದಿಲ್ಲ. ಅರ್ಜಿದಾರರು ನಿಯಮಾನುಸಾರ ಅಗತ್ಯವಿರುವ ಪೂರಕ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಜಿಲ್ಲಾ ಚುನಾವಣಾ ವಿಭಾಗವು ಸ್ಪಷ್ಟಪಡಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬಿ.ಎಲ್.ಓ (BLO) ಹಂತದಲ್ಲಿ ಕೆಲವು ನ್ಯೂನತೆಗಳು ಕಂಡುಬಂದ ಹಿನ್ನೆಲೆಯಲ್ಲಿ, ನಿನ್ನೆಯಷ್ಟೇ ಎಲ್ಲಾ ಮತದಾರರ ನೋಂದಣಾಧಿಕಾರಿಗಳಿಗೆ (ERO) ಈ ಕುರಿತು ಲಿಖಿತ ಸೂಚನೆ ನೀಡಲಾಗಿದೆ. ಫಾರ್ಮ್-6 ರಡಿ ಅರ್ಜಿ ಸಲ್ಲಿಸುವಾಗ ಕೇವಲ ಆಧಾರ್ ಕಾರ್ಡ್‌ಗೆ ಸೀಮಿತವಾಗದೆ, ತಂದೆ-ತಾಯಿಯರ ಗುರುತಿನ ದಾಖಲೆ, ಬಾಡಿಗೆ ಕರಾರು ಪತ್ರ, ಮನೆ ಅಥವಾ ಆಸ್ತಿ ದಾಖಲೆಗಳು, ಶಾಲಾ/ಕಾಲೇಜು ಗುರುತಿನ ಚೀಟಿ, ಜನ್ಮ ದಿನಾಂಕ ಪ್ರಮಾಣಪತ್ರ ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಸೇರಿದಂತೆ ಯಾವುದಾದರೂ ಒಂದು ಸೂಕ್ತ ದಾಖಲೆಯನ್ನು ಕಡ್ಡಾಯವಾಗಿ ಲಗತ್ತಿಸಬೇಕಾಗುತ್ತದೆ ಎಂದರು.
ಯಾವುದೇ ಸಕಾರಣವಿಲ್ಲದೆ ಅಥವಾ ಸೂಕ್ತ ಪರಿಶೀಲನೆ ನಡೆಸದೆ ಅರ್ಜಿಗಳನ್ನು ತಿರಸ್ಕರಿಸಲಾಗಿಲ್ಲ. ಆನ್‌ಲೈನ್ ಮೂಲಕ ಫಾರ್ಮ್-6 ಅರ್ಜಿ ಸಲ್ಲಿಸಿ, ವಯಸ್ಸು ಅಥವಾ ವಿಳಾಸಕ್ಕೆ ಸಂಬಂಧಿಸಿದ ಯಾವುದೇ ಪೂರಕ ದಾಖಲೆಗಳನ್ನು ಅಪ್‌ಲೋಡ್ ಮಾಡದಿರುವ ಅರ್ಜಿಗಳನ್ನು ಹಾಗೂ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಪುನಃ ಫಾರ್ಮ್-6 ಸಲ್ಲಿಸಿರುವ ದ್ವಿಪ್ರತಿ (Duplicate) ಅರ್ಜಿಗಳನ್ನು ನಿಯಮಾನುಸಾರ ತಿರಸ್ಕರಿಸಲಾಗಿದೆ ಎಂದರು
ಮತಗಟ್ಟೆ ಹಂತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮೇಲ್ವಿಚಾರಕರು ಹಾಗೂ ಬಿ.ಎಲ್.ಓ ಗಳಿಂದ ದೃಢೀಕರಣ ಪತ್ರಗಳನ್ನು ಪಡೆಯಲಾಗುತ್ತಿದೆ. ಯಾವುದೇ ಬಲ್ಕ್ (ಸಗಟು) ಅರ್ಜಿಗಳನ್ನು ನಿಯಮಬಾಹಿರವಾಗಿ ಸ್ವೀಕರಿಸಿಲ್ಲ. ಮತದಾರರ ಹೆಸರು ಸೇರ್ಪಡೆ (ಫಾರ್ಮ್-6) ಹಾಗೂ ಹೆಸರು ತೆಗೆದುಹಾಕುವಿಕೆ/ಆಕ್ಷೇಪಣೆ (ಫಾರ್ಮ್-7) ಕುರಿತಾದ ಮಾಹಿತಿಯನ್ನು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್ (BLA) ಗಳೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು, ಮುಂಬರುವ ಸಾಪ್ತಾಹಿಕ ಸಭೆಗಳಲ್ಲಿ ಆಕ್ಷೇಪಣೆ ಅಥವಾ ಅನಿಸಿಕೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಆನ್‌ಲೈನ್ ಮೂಲಕ ಸ್ವೀಕೃತವಾಗಿರುವ ಫಾರ್ಮ್-7 ಅರ್ಜಿಗಳಲ್ಲಿ, ಸ್ಥಳಾಂತರಗೊಂಡಿರುವವರು(Shifted), ಮೃತರಾದವರು(Dead) ಹಾಗೂ ದ್ವಿಪ್ರತಿ ಅರ್ಜಿಗಳನ್ನು ಮಾತ್ರ ಪರಿಶೀಲಿಸಿ, ನಿಯಮಾವಳಿಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತಿದೆ. ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಅತ್ಯಂತ ದಕ್ಷತೆ ಮತ್ತು ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಪದವೀಧರ ಕ್ಷೇತ್ರದ ಚುನಾವಣೆ:
ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 29 ರಂದು ಅಧಿಸೂಚನೆ ಹೊರಬಿದ್ದಿದ್ದು, ಅಕ್ಟೋಬರ್ 23 ರಂದು ಬೆಳಿಗ್ಗೆ 8 ರಿಂದ 4 ಗಂಟೆಯವರಿಗೆ ಮತದಾನ ನಡೆಯಲಿದೆ ಹಾಗೂ ಅಕ್ಟೋಬರ್ 27 ರಂದು ಮತ ಎಣಿಕೆ ನಡೆಯಲಿದೆ. ಅಕ್ಟೋಬರ್ 31 ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಜಿಲ್ಲೆಯಲ್ಲಿ ಅಂದಾಜು 30000 ಪದವೀಧರ ಮತದಾರರು ನೋಂದಾಯಿತರಾಗಿದ್ದು, ಮತದಾನಕ್ಕಾಗಿ ಒಟ್ಟು 43 ಮತಗಟ್ಟೆಗಳನ್ನು (ಹರಿಹರ-10, ದಾವಣಗೆರೆ ಉತ್ತರ-17, ದಾವಣಗೆರೆ ದಕ್ಷಿಣ-06, ಮಾಯಕೊಂಡ ತಾಲೂಕು-06, ಜಗಳೂರು-04) ಸ್ಥಾಪಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್ ಹಾಗೂ ಇತರರು ಉಪಸ್ಥಿತರಿದ್ದರು.

