ಬೆಂಗಳೂರು: ಕಾವೇರಿ ಜಲ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದಿದ್ದು, ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ನಿರ್ದೇಶನದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಆಗಸ್ಟ್ 13 ರಂದು ಕರ್ನಾಟಕ ಬಂದ್ಗೆ ಕರೆ ನೀಡಿದೆ.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳ ಮಹತ್ವದ ಸಭೆ ನಡೆದಿದೆ. ಸಭೆ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್ ಆಗಸ್ಟ್ 13 ರಂದು ಗುರುವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ಹೇಳಿದ್ದಾರೆ.ಆಗಸ್ಟ್ 13 ರಂದು ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದಿರುವ ಕಾರಣಕ್ಕೆ ಅಂದೇ ಬಂದ್ ನಡೆಸಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿದೆ.
ಬೆಂಗಳೂರಿನ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ” ಆಗಸ್ಟ್ 13 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದೇವೆ, ದಯವಿಟ್ಟು ಯಾರು ಕೂಡ ಬಂದ್ ಗೆ ವಿರೋಧ ಮಾಡಬೇಡಿ. ಎಲ್ಲರೂ ಸಹಕಾರ ನೀಡಿ” ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ನೀಡಬಾರದು. “ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ನಿರ್ಧಾರವನ್ನು ಒಪ್ಪಲಾಗುವುದಿಲ್ಲ ಎಂದಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಅವರ ಮೇಲೆ ಒಳ್ಳೆ ಗೌರವಿದೆ. ಅವರು ಒಳ್ಳೆ ವ್ಯಕ್ತಿ. ನೀವು ಒಳ್ಳೆ ತೀರ್ಮಾನ ಮಾಡಿಕೊಂಡು ಕರ್ನಾಟಕಕ್ಕೆ ಬನ್ನಿ, ಇಲ್ಲವಾದರೆ ಬರಬೇಡಿ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ನಾಟಕೀಯ ಸಭೆಯನ್ನು ನಾವು ಒಪ್ಪಲ್ಲ. ಕಾವೇರಿ ವಿಚಾರದಲ್ಲಿ ಸರ್ಕಾರ ಸರ್ವ ಪಕ್ಷ ಸಭೆ ಕರೆದಿರುವುದು ಸರಿಯಲ್ಲ. ಕಾವೇರಿಗಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ, ನಮ್ಮನ್ನು ಜೈಲಿಗೆ ಹಾಕಿದರೂ ನಾವು ಜಗ್ಗಲ್ಲ ಎಂದರು.ಅದೇ ರೀತಿ ಕನ್ನಡಿಗರಿಗೆ ಉದ್ಯೋಗ ಕೊಡಿಸಿ, ಕನ್ನಡ ಮಾಧ್ಯಮ ಶಾಲೆಗಳಿಗೆ ಆದ್ಯತೆ ಕೊಡಿ ಎಂದರು.
ಏರ್ ಪೋರ್ಟ್ ಗೆ ಮುತ್ತಿಗೆ ಹಾಕುತ್ತೇವೆ ; ವಾಟಾಳ್ ನಾಗರಾಜ್
ತಮಿಳುನಾಡು ಸಿಎಂ ವಿಜಯ್ ಕರ್ನಾಟಕಕ್ಕೆ ಬರಬಾರದು, ಬಂದರೆ ಏರ್ ಪೋರ್ಟ್ ಗೆ ಮುತ್ತಿಗೆ ಹಾಕುತ್ತೇವೆ, ಅವರು ವಿಮಾನದಲ್ಲಿ ಬರಲಿ ಅಥವಾ ಹೆಲಿಕಾಪ್ಟರ್ ನಲ್ಲಿ ಬರಲಿ ನಾವು ಮುತ್ತಿಗೆ ಹಾಕುತ್ತೇವೆ. ಅವರು ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಬರಬಾರದು ಎಂದು ವಾಟಾಳ್ ನಾಗರಾಜ್ ಹೇಳಿದರು.
ವಿವಿಧ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಸಾರ್ವಜನಿಕ ಸಂಘಟನೆಗಳು ಈ ಸಭೆಯಲ್ಲಿ ಭಾಗವಹಿಸಿ ಹೋರಾಟದ ಮುಂದಿನ ದಿಕ್ಕನ್ನು ನಿರ್ಧರಿಸಲಿವೆ.ಕಾವೇರಿ ನೀರು ಬಿಡುಗಡೆ ವಿಚಾರವಾಗಿ ರಾಜ್ಯ ಸರ್ಕಾರ ಈಗಾಗಲೇ ಸರ್ವಪಕ್ಷ ಸಭೆ ಕರೆದಿದ್ದು, ಕಾನೂನು ಹಾಗೂ ರಾಜಕೀಯ ಮಟ್ಟದಲ್ಲಿ ಹೋರಾಟ ಮುಂದುವರಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ. ಮತ್ತೊಂದೆಡೆ, ಕನ್ನಡಪರ ಸಂಘಟನೆಗಳು ಸರ್ಕಾರವು ರಾಜ್ಯದ ಹಿತಾಸಕ್ತಿಯನ್ನು ದೃಢವಾಗಿ ಕಾಪಾಡಬೇಕು ಎಂದು ಆಗ್ರಹಿಸಿವೆ.
ಕಾವೇರಿ ಜಲ ವಿವಾದ
ಕಾವೇರಿ ಜಲ ವಿವಾದವು ಕರ್ನಾಟಕ ಮತ್ತು ತಮಿಳುನಾಡು ನಡುವಿನ ದೀರ್ಘಕಾಲದ ನದಿ ನೀರು ಹಂಚಿಕೆ ಸಂಘರ್ಷವಾಗಿದೆ. ಜುಲೈ 28, 2026 ರಂದು, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕವು ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ಹರಿಸಬೇಕೆಂದು ಆದೇಶಿಸಿದೆ. ರಾಜ್ಯದಲ್ಲಿ ನೀರಿನ ಕೊರತೆ ಇರುವುದರಿಂದ ಈ ಆದೇಶದ ವಿರುದ್ಧ ಕರ್ನಾಟಕದಲ್ಲಿ ತೀವ್ರ ಪ್ರತಿಭಟನೆಗಳು ನಡೆದಿವೆ.
ಮಳೆ ಕೊರತೆ ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ತೃಪ್ತಿಕರವಾಗಿಲ್ಲದ ಕಾರಣ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ವಿರೋಧಿಸುತ್ತಿದೆ.ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸಬೇಕೆಂಬ CWRC ಸೂಚನೆಯನ್ನು ಖಂಡಿಸಿ ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧಡೆ ರೈತರು ಮತ್ತು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮುಖಂಡರು ಮತ್ತು ಚಿತ್ರರಂಗದವರಿಂದಲೂ ಈ ಕುರಿತು ಸಭೆಗಳು ನಡೆದು, ಸರ್ಕಾರದ ನಿಲುವಿನ ಬಗ್ಗೆ ಚರ್ಚೆಗಳು ಮುಂದುವರೆದಿವೆ.
ಕಾವೇರಿ ನೀರು ಹಂಚಿಕೆ ವಿವಾದ : ಆಗಸ್ಟ್ 2ಕ್ಕೆ ಸರ್ವಪಕ್ಷ ಸಭೆ ಕರೆದ ಸಿಎಂ ಡಿಕೆಶಿ
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಮುಂದಿನ ನಿಲುವು ನಿರ್ಧರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಸ್ಟ್ 2ರಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎತ್ತಿಹಿಡಿದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಕ್ರೋಶ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ಸಭೆ ನಡೆಸಲು ಮುಂದಾಗಿದೆ.
ಆಗಸ್ಟ್ 2ರಂದು ನಡೆಯಲಿರುವ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಂಸದರು, ಕಾವೇರಿ ಜಲಾನಯನ ಪ್ರದೇಶದ ಜನಪ್ರತಿನಿಧಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸುವ ಸಾಧ್ಯತೆ ಇದೆ. ಕಾವೇರಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಒಗ್ಗಟ್ಟಿನ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದ ಸಭೆ ಕರೆಯಲಾಗಿದೆ.
ಈ ನಡುವೆ ಕಾವೇರಿ ನೀರು ಬಿಡುಗಡೆ ಆದೇಶವನ್ನು ಪ್ರಶ್ನಿಸಲು ಕರ್ನಾಟಕ ಸರ್ಕಾರ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ತಿಳಿಸಿದೆ. ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಜಲಾಶಯಗಳ ನೀರಿನ ಮಟ್ಟದ ಬಗ್ಗೆ ಆತಂಕ ವ್ಯಕ್ತವಾಗಿದ್ದು, ರೈತರ ಹಿತದೃಷ್ಟಿಯಿಂದ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ.

