ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕೂಡ ಆದೇಶ ಹೊರಡಿಸಿರುವ ಬೆನ್ನಲ್ಲೇ ಮತ್ತೆ ಕಾವೇರಿಕೊಳ್ಳ, ಮಂಡ್ಯ ಭಾಗದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ರೈತರು ಹಾಗೂ ಕನ್ನಡಪರ ಸಂಗಹ್ಟನೆ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
15 ದಿನಗಳ ಕಾಲ ಪ್ರತಿದಿನ ತಮಿಳುನಾಡಿಗೆ 3,500 ಕ್ಯೂಸೆಕ್ ನೀರಿನಂತೆ 4 ಟಿಎಂಸಿ ನೀರು ಹರಿಸುವಂತೆ ಈಗಾಗಲೇ CWRC ಹೊರಡಿಸಿದ್ದ ಆದೇಶದಿಂದ ಆಕ್ರೋಶಗೊಂಡಿದ್ದ ರೈತರು, ಕನ್ನಡ ಪರ ಸಂಘಟನೆಗಳು ಇದೀಗ CWMA ಆದೇಶ ಹೊರ ಬೀಳುತ್ತಿದ್ದಂತೆ ಸಿಡಿದೆದ್ದಿದ್ದಾರೆ. ಮಂಡ್ಯದ ಸಂಜಯ ವೃತ್ತದಲ್ಲಿ ರಸ್ತೆ ತಡೆ, ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿಗೆ ನೀರು ಬಿಡಬೇಕು ಎಂಬ ಆದೇಶ ಖಂಡಿಸಿ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಟೈರ್ ಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ರೈತರನ್ನು ತಡೆದಿದ್ದಾರೆ. ಟೈರ್ ಹಾಗೂ ಪೆಟ್ರೋಲ್ ತುಂಬಿದ್ದ ಬಾಟಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳು ರಸ್ತೆಯಲ್ಲಿಯೇ ಧರಣಿ ಕುಳಿತಿದ್ದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿವೆ. ಸಮರ್ಥವಾಗಿ ವಾಡ ಮಂಡಿಸದ ಬಗ್ಗೆ ಕಿಡಿಕಾರಿವೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಪೊಲೀಸರು ಕೆಲ ಕಾರ್ಯಕರ್ತರನ್ನು ಸ್ಥಳದಿಂದ ಎಳೆದೊಯ್ದು ವಶಕ್ಕೆ ಪಡೆದಿದ್ದಾರೆ.

