ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ತಂದೆಯೊಬ್ಬ ತನ್ನ ಮಗಳನ್ನೇ ಕೊಲೆಗೈಯ್ಯಲು ಯತ್ನಿಸಿ ಚಾಕು ಇರಿದ ಘಟನೆ ಬೆಂಗಳೂರಿನ ರಾಜಾನುಕುಂಟೆಯಲ್ಲಿ ನಡೆದಿದೆ.
ಲಕ್ಷ್ಮೀದುರ್ಗಾ ಹಲ್ಲೆಗೊಳಗಾದ ಯುವತಿ. ನಾಗೇಂದ್ರ ಮಗಳನ್ನೇ ಕೊಲೆಗೈಯ್ಯಲು ಯತ್ನಿಸಿದ ಆರೋಪಿ. ಸದ್ಯ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿ ಸಮೀಪದ ವಿಜಯಪುರ ಪಟ್ಟಣ ನಿವಾಸಿಯಾಗಿರುವ ನಾಗೇಂದ್ರನಿಗೆ ನಾಲ್ಕು ಮಕ್ಕಳಿದ್ದಾರೆ. ಈ ಪೈಕಿ ಎರಡನೇ ಪುತ್ರಿ ಲಕ್ಷ್ಮೀ ದುರ್ಗಾ, ರಾಜಾನುಕುಂಟೆ ಬಳಿ ಎಸ್ಐವಿಟಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಅವಿವಾಹಿತೆಯಾಗಿದ್ದ ಲಕ್ಷ್ಮೀಗೆ ಒಂದು ತಿಂಗಳ ಹಿಂದೆ ತಂದೆ ನಾಗೇಂದ್ರ ಮದುವೆಗೆ ಗಂಡು ನೋಡಿದ್ದರು. ಹುಡುಗನ ಮನೆಯವರು ಲಕ್ಷ್ಮೀಯನ್ನು ನೋಡಿ ಒಪ್ಪಿಕೊಂಡಿದ್ದರು. ಈ ವೇಳೆ ಕ್ಯಾತೆ ತೆಗೆದ ನಾಗೇಂದ್ರ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಓದಿಸಿದ್ದೇನೆ. ಮಗಳನ್ನು ಮದುವೆ ಮಾಡಿಕೊಳ್ಳಬೇಕಾದರೆ 40 ಲಕ್ಷ ಹಣ ಹಾಗೂ ಪ್ರತಿ ತಿಂಗಳ ಸಂಬಳ ತನಗೆ ನೀಡಬೇಕೆಂದು ಗಂಡಿನ ಮನೆಯವರಿಗೆ ತಾಕೀತು ಮಾಡಿದ್ದರು. ಇದಕ್ಕೆ ನಾಗೇಂದ್ರ ಮನೆಯಿಂದಲೇ ವಿರೋಧ ವ್ಯಕ್ತವಾಗಿತ್ತು ಎಂದು ಲಕ್ಷ್ಮೀ ದುರ್ಗಾ ಅವರ ಸಹೋದ್ಯೋಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆ ವಿಚಾರವಾಗಿ ಮನೆಯಿಂದಲೇ ವಿರೋಧ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ಜಗಳವಾಡಿ ಸಾಯಿಸುವುದಾಗಿ ತಂದೆ ಬೆದರಿಕೆ ಹಾಕಿದ್ದರು. ಇದರಿಂದ ಭಯಗೊಂಡು ಲಕ್ಷ್ಮೀ, ಒಂದು ತಿಂಗಳ ಹಿಂದೆ ಬಾಗಲೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪ್ರತ್ಯೇಕವಾಗಿ ವಾಸವಾಗಿದ್ದಳು. ಇಲ್ಲಿಂದಲೇ ಕಾಲೇಜಿಗೆ ಹೋಗಿ ಬರುತ್ತಿದ್ದರು. ಜುಲೈ 25ರಂದು ಮಗಳ ಭೇಟಿಗಾಗಿ ತಂದೆ ನಾಗೇಂದ್ರ ಕಾಲೇಜು ಬಳಿ ಬಂದಿದ್ದರು. ಈ ವೇಳೆ ಲ್ಯಾಬ್ನಲ್ಲಿದ್ದ ಲಕ್ಷ್ಮೀ ಭೇಟಿಯಾಗುತ್ತಿದ್ದಂತೆ ಜೇಬಿನಲ್ಲಿದ್ದ ಚಾಕುವಿನಿಂದ ಮಗಳ ಎದೆ, ಕುತ್ತಿಗೆ ಹಾಗೂ ಇತರ ಭಾಗಗಳಿಗೆ ಚುಚ್ಚಿ ಪರಾರಿಯಾಗಿದ್ದಾರೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾದ ಲಕ್ಷ್ಮೀ ರಕ್ತದ ಮಡುವಲ್ಲಿ ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಸಹೋದ್ಯೋಗಿಗಳು ಲಕ್ಷ್ಮೀ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಲಕ್ಷ್ಮೀ ಅವರು ಚಿಕಿತ್ಸೆ ಪಡೇಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ರಾಜಾನುಕುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

