ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೆ ಶಾಕ್ ಎದುರಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA), ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (CWRC) ಆದೇಶವನ್ನು ಎತ್ತಿ ಹಿಡಿದಿದೆ.
15 ದಿನಗಳ ಕಾಲ ಪ್ರತಿ ದಿನ 3500 ಕ್ಯೂಸೆಕ್ ನಂತೆ 4 ಟಿಎಂಸಿ ನೀರನ್ನು ಕರ್ನಾಟಕ, ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೂಡ ಆದೇಶ ಹೊರಡಿಸಿದೆ.
3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ CWRC ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿದ್ದು, ಸಭೆಯಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ.
ಕರ್ನಾಟಕದ ಪರವಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಪ್ರಬಲ ವಾದ ಮಂಡಿಸಿದರು. CWRC ಶಿಫಾರಸ್ಸುನ್ನು ಕರ್ನಾಟಕ ಪಾಲಿಸಲು ಸಾಧ್ಯವೇ ಇಲ್ಲ. ಮಳೆಯ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸಮರ್ಪಕ ನೀರಿಲ್ಲ. ಈ ವರ್ಷ ಬಿಳಿಗುಂಡ್ಲು ಬಳಿ ನಿತ್ಯ 178 ಕ್ಯೂಸೆಕ್ ಹರಿವಿದೆ. ಈ ವರ್ಷ ದ ಜೂನ್, ಜುಲೈ ನಲ್ಲಿ 3.55 ಟಿಎಂಸಿ ಹರಿದು ಹೋಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನಿತ್ಯ 30,748 ಕ್ಯೂಸೆಕ್ ನೀರು ಪ್ಲೊ ಇತ್ತು. ಕಳೆದ ವರ್ಷ ಈ ಸಮಯದಲ್ಲಿ 116.92 ಟಿಎಂಸಿ ನೀರು ಹರಿದಿತ್ತು. ಸದ್ಯ ಕಾವೇರಿ ಜಲಾಶಯಗಳಲ್ಲಿ 36.69 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನಮ್ಮ ಜಲಾಶಯಗಳಲ್ಲಿ 99 ಟಿಎಂಸಿ ನೀರು ಶೇಖರಣೆಯಾಗಿತ್ತು. ಸಾಮಾನ್ಯ ವರ್ಷಗಳಲ್ಲಿ ಈ ಸಮಯಕ್ಕೆ 40 ಟಿಎಂಸಿ ನೀರು ಹರಿಸಲಾಗುತ್ತಿತ್ತು. ಆದರೆ ಈ ವರ್ಷ ಬರದ ತೀವ್ರತೆ ಹೆಚ್ಚಿರುವ ಕಾರಣ 3.5 ಟಿಎಂಸಿ ಮಾತ್ರ ಹರಿದಿದೆ. ಬರದ ತೀವ್ರತೆ, ಜಲಾಶಯಗಳಲ್ಲಿ ನೀರಿನ ಕೊರತೆಯನ್ನು ಪರಿಗಣಿಸಬೇಕು . CWRC ಪತ್ರಿನಿತ್ಯ 3,500 ಕ್ಯೂಸೆಕ್ ನೀರು ಬಿಡಿ ಎಂದಿದ್ದಾರೆ. ಬಿಳಿಗುಂಡ್ಲುವಿನಲ್ಲಿ 3500 ಕ್ಯೂಸೆಕ್ ಹರಿವು ದಾಖಲಿಸಲು ಜಲಾಶಯಗಳಿಂದ ದುಪ್ಪಟ್ಟು ನೀರು ಹರಿಸಬೇಕು ಹೀಗಾಗಿ CWRC ಆದೇಶವನ್ನು ಪರಿಶೀಲಿಸುವಂತೆ ವಾದ ಮಂಡಿಸಿದ್ದಾರೆ.
ವಾದ ಆಲಿಸಿದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ CWRC ಆದೇಶವನ್ನೇ ಎತ್ತಿ ಹಿಡಿದಿದೆ. 15 ದಿನಗಳ ಕಾಲ ತಮಿಳುನಾಡಿಗೆ ಕರ್ನಾಟಕ ಪತ್ರಿನಿತ್ಯ 3500 ನೀರು ಬಿಡಬೇಕು ಎಂದು ಸೂಚಿಸಿದೆ.

