ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಇಂದು ಟೆಲಿಕಾಂ, ಮಾಧ್ಯಮ, ಸೆಮಿಕಂಡಕ್ಟರ್ ಮತ್ತು ತಂತ್ರಜ್ಞಾನ (TMT) ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ವೇಗವಾಗಿ ವಿಸ್ತರಿಸುತ್ತಿದೆ. ಎಐ ಮೇಲಿನ ಹೂಡಿಕೆ ಮತ್ತು ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಅದರಿಂದ ದೊರೆಯುತ್ತಿರುವ ನೈಜ ವ್ಯಾಪಾರ ಲಾಭವನ್ನು ಅಳೆಯುವಲ್ಲಿ ಬಹುತೇಕ ಕಂಪನಿಗಳು ಇನ್ನೂ ಹಿನ್ನಡೆಯಲ್ಲಿವೆ ಎಂಬ ಅಚ್ಚರಿಯ ಸಂಗತಿ ಹೊಸ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.
ಈ ಮಾಹಿತಿಯನ್ನು ಎಕನಾಮಿಸ್ಟ್ ಎಂಟರ್‌ಪ್ರೈಸ್ ಮತ್ತು ಜಾಗತಿಕ ಐಟಿ ಸಂಸ್ಥೆ ಎಚ್‌ಸಿಎಲ್ ಟೆಕ್ ಜಂಟಿಯಾಗಿ ಪ್ರಕಟಿಸಿರುವ ‘The Value Edge: Powering the Next Era of TMT’ ವರದಿ ತಿಳಿಸಿದೆ. ಅಮೆರಿಕ ಮತ್ತು ಯುರೋಪ್‌ನ ಟೆಲಿಕಾಂ, ಮಾಧ್ಯಮ ಹಾಗೂ ತಂತ್ರಜ್ಞಾನ ಕ್ಷೇತ್ರಗಳ 200ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳ ಅಭಿಪ್ರಾಯಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ.
91% ಕಂಪನಿಗಳಿಗೆ ನಂಬಿಕೆ, ಆದರೆ ಕೇವಲ 33% ಮಾತ್ರ ಲಾಭ ಅಳೆಯಲು ಸಮರ್ಥ
ವರದಿ ಪ್ರಕಾರ, ಶೇ.91ರಷ್ಟು ಸಂಸ್ಥೆಗಳು ಎಐ ಮೇಲಿನ ಹೂಡಿಕೆ ಉತ್ತಮ ಫಲ ನೀಡಲಿದೆ ಎಂಬ ವಿಶ್ವಾಸ ಹೊಂದಿವೆ. ಆದರೆ, ಕೇವಲ ಶೇ.33ರಷ್ಟು ಕಂಪನಿಗಳು ಮಾತ್ರ ಎಐನಿಂದ ಆಗುತ್ತಿರುವ ನಿಖರವಾದ ವ್ಯಾಪಾರ ಲಾಭವನ್ನು ಅಳೆಯಲು ಸಮರ್ಥವಾಗಿವೆ. ಲಾಭದ ಸ್ಪಷ್ಟ ಲೆಕ್ಕಾಚಾರ ಇಲ್ಲದಿರುವುದು ಎಐಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಪ್ರಮುಖ ಅಡ್ಡಿಯಾಗುತ್ತಿದೆ.
ಎಐ ಕೌಶಲ್ಯ ಬೆಳೆಸುವಲ್ಲಿ ಕಂಪನಿಗಳ ಹಿನ್ನಡೆ
ಎಐ ಅಳವಡಿಕೆಯಲ್ಲಿ ಕಂಪನಿಗಳು ಮುಂದಿದ್ದರೂ, ಉದ್ಯೋಗಿಗಳಿಗೆ ಅಗತ್ಯ ಕೌಶಲ್ಯ ನೀಡುವ ವಿಷಯದಲ್ಲಿ ಸಾಕಷ್ಟು ಹೂಡಿಕೆ ಮಾಡುತ್ತಿಲ್ಲ. ಅಧ್ಯಯನದ ಪ್ರಕಾರ, ಕೇವಲ ಶೇ.20ರಷ್ಟು ಸಂಸ್ಥೆಗಳು ಮಾತ್ರ ಉದ್ಯೋಗಿಗಳಿಗೆ ಎಐ ತರಬೇತಿ ನೀಡಲು ಅಥವಾ ಹೊಸ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಸ್ಪಷ್ಟ ಕಾರ್ಯತಂತ್ರ ರೂಪಿಸಿವೆ.
ಎಐ ಬಳಕೆ ವೇಗವಾಗಿ ಹೆಚ್ಚುತ್ತಿದ್ದರೂ, ಅದರ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಕಂಪನಿಗಳು ಹಿಂದೆಬಿದ್ದಿವೆ. ಕೇವಲ ಶೇ.17ರಷ್ಟು ಸಂಸ್ಥೆಗಳು ಮಾತ್ರ ತಮ್ಮ ಎಐ ವ್ಯವಸ್ಥೆಗಳ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ವರದಿ ತಿಳಿಸಿದೆ.
ತಜ್ಞರ ಅಭಿಪ್ರಾಯ
ಎಚ್‌ಸಿಎಲ್ ಟೆಕ್‌ನ ಟೆಲಿಕಾಂ, ಮೀಡಿಯಾ ಮತ್ತು ಟೆಕ್ ವಿಭಾಗದ ಗ್ಲೋಬಲ್ ಹೆಡ್ ಅನಿಲ್ ಗಂಜೂ ಅವರ ಪ್ರಕಾರ, “ಎಐ ಪ್ರಯೋಗಗಳಲ್ಲೇ ನಿಲ್ಲದೆ, ಅದನ್ನು ನೈಜ ವ್ಯವಹಾರ ಮೌಲ್ಯ ಮತ್ತು ಗ್ರಾಹಕರಿಗೆ ಉತ್ತಮ ಅನುಭವ ನೀಡುವ ಸಾಧನವಾಗಿ ಪರಿವರ್ತಿಸುವ ಸಂಸ್ಥೆಗಳೇ ಭವಿಷ್ಯದ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಲಿವೆ.”
ಇದೇ ವೇಳೆ, ಎಕನಾಮಿಸ್ಟ್ ಎಂಟರ್‌ಪ್ರೈಸ್‌ನ ಷಾರ್ಲೆಟ್ ಬುಲ್ಲಾರ್ಡ್ ಡೇವಿಸ್ ಅವರು, “ಎಐ ಹೊಸ ಆದಾಯದ ಅವಕಾಶಗಳನ್ನು ಸೃಷ್ಟಿಸಬಲ್ಲದು. ಆದರೆ ಸ್ಪಷ್ಟ ಕಾರ್ಯತಂತ್ರ, ಪಾಲುದಾರಿಕೆ ಮತ್ತು ಪರಿಣಾಮಕಾರಿ ಆಡಳಿತ ವ್ಯವಸ್ಥೆ ಇದ್ದಾಗ ಮಾತ್ರ ಸಂಸ್ಥೆಗಳು ದೀರ್ಘಕಾಲಿಕ ಯಶಸ್ಸು ಸಾಧಿಸಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

