HomeLatest Newsತಮಿಳುನಾಡಿಗೆ ನೀರು ಹರಿಸಿ ಎಂಬ ಆದೇಶ ಅವೈಜ್ಞಾನಿಕ; ಎಚ್‌ಡಿಕೆ ಕಿಡಿ

ತಮಿಳುನಾಡಿಗೆ ನೀರು ಹರಿಸಿ ಎಂಬ ಆದೇಶ ಅವೈಜ್ಞಾನಿಕ; ಎಚ್‌ಡಿಕೆ ಕಿಡಿ

ಹಾಸನ-ಕಾವೇರಿ ನೀರು ನಿಯಂತ್ರಣ ಸಮಿತಿ (cwrc) ತಮಿಳುನಾಡಿಗೆ ಹದಿನೈದು ದಿನಗಳ ಕಾಲ ನಿತ್ಯವೂ 3,500 ಕ್ಯೂಸೆಕ್ ನೀರು ಹರಿಸಬೇಕು ಎಂದು ನೀಡುವ ಆದೇಶವು ರಾಜ್ಯದ ಪಾಲಿಗೆ ಮರಣಶಾಸನವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಹರದನಹಳ್ಳಿಯ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀಮತಿ ಚನ್ನಮ್ಮ ಅವರ ಸಮಾಧಿ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು; ರಾಜ್ಯದಲ್ಲಿ ಒಂದೆಡೆ ಬರ ಉಂಟಾಗಿದೆ. ಇನ್ನೊಂದು ಕಡೆ ಮಳೆ ಇಲ್ಲದೆ ಜಲಾಶಗಳು ಭರ್ತಿ ಆಗಿಲ್ಲ. ರೈತರಿಗೂ ನೀರು ಕೊಡಲಾಗದ ಸಂಕಷ್ಟದಲ್ಲಿದೆ ರಾಜ್ಯ. ಕುಡಿಯುವ ಉದ್ದೇಶಕ್ಕೆ ನೀರು ಕೊರತೆ ಆಗಬಾರದು. ಇಂತಹ ಕಠಿಣ ಸಂದರ್ಭದಲ್ಲಿ ಸಮಿತಿ ನೆರೆ ರಾಜ್ಯಕ್ಕೆ ನೀರು ಹರಿಸಿ ಎಂದು ರಾಜ್ಯಕ್ಕೆ ಆದೇಶ ನೀಡುವುದು ಅವೈಜ್ಞಾನಿಕ ಎಂದರು.

ಮುಂದಿನ ದಿನಗಳಲ್ಲಿ ಮಳೆ ಆಗದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತಿದೆ. ಈ ಆದೇಶದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗುತ್ತದೆ. ಈಗಾಗಲೇ ರೈತರು, ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿ ಹೋರಾಟಕ್ಕೆ ಇಳಿದಿದ್ದಾರೆ. ನೀರು ಇಲ್ಲದ ಸಮಯದಲ್ಲಿ ತಮಿಳುನಾಡಿನವರು ಒತ್ತಡ ಹಾಕುತಿದ್ದಾರೆ. ಆದರೆ ನಮ್ಮ ನಾಡಿನ ಪರಿಸ್ಥಿತಿಯನ್ನು ನಾವು ಕಾವೇರಿ ಪ್ರಾಧಿಕಾರಕ್ಕೆ ಅರ್ಥ ಮಾಡಿಸಬೇಕು. ನಮ್ಮ ಕಾನೂನು ಪಂಡಿತರು, ಅಧಿಕಾರಿಗಳು ಸಮರ್ಪಕವಾಗಿ ವಾದ ಮಂಡಿಸಿಲ್ಲ ಎಂದು ನಾನು ಹೇಳಲಾರೆ. ಆದರೆ ನೀರಿನ ನಿರ್ವಹಣೆಯಲ್ಲಿ ನಾವೆಷ್ಟು ಉತ್ತಮವಾಗಿ ಕೆಲಸ ಮಾಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀರು ನಿರ್ವಹಣೆಯಲ್ಲಿ ವಿಫಲತೆ: ಆತ್ಮಾವಲೋಕನ ಅಗತ್ಯ

ಕಳೆದ ವರ್ಷ ಮೂರು ಬಾರಿ ನಮ್ಮ ಜಲಾಶಯಗಳು ತುಂಬಿದ್ದೆವು. ಆ ಸಂದರ್ಭ ಕೆರೆಗಳನ್ನು ತುಂಬಿಸುವಂತಹ ಕೆಲಸವನ್ನು ನಾವು ಮುನ್ನೆಚ್ಚರಿಕೆಯಿಂದ ಮಾಡಬೇಕಾಗಿತ್ತು. ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ರಾಜ್ಯ ಸರಕಾರ ಸಕಾಲಿಕ ಕ್ರಮ ವಹಿಸಿದ್ದರೆ ಕೆರೆಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಬಹುದಿತ್ತು. ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾದಾಗ ಕೆರೆಗಳಿಗೆ ನೀರು ತುಂಬಿಸದೆ ನೀರನ್ನು ಹೊರಗೆ ಬಿಟ್ಟರು. ತಮಿಳುನಾಡು ರಾಜ್ಯ ಕೂಡ ಮಳೆಯಿಂದ ದೊರೆತ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳದೆ ಸಮುದ್ರಕ್ಕೆ ಬಿಟ್ಟಿತು. ಅದರ ಫಲವನ್ನು ಈಗ ಅನುಭವಿಸುತ್ತಿದ್ದೇವೆ ಎಂದು ಸಚಿವ ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪದೇಪದೇ ಇಂಥ ಬಿಕ್ಕಟ್ಟು ಎದುರಾಗುತ್ತಿದ್ದರೂ ಎರಡು ರಾಜ್ಯಗಳು ಪಾಠ ಕಲಿಯುತ್ತಿಲ್ಲ. ಹೆಚ್ಚಿನ ಮಳೆಯಾದ ವರ್ಷದಲ್ಲಿ ನಾವು ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಅಂತಹ ಜವಾಬ್ದಾರಿಯನ್ನು ನಿರ್ವಹಿಸದೆ ನಾವು ಎಡವಿದ್ದೇವೆ ಎಂದು ಸಚಿವರು ಹೇಳಿದರು.

ನಮಗೆ ಹತ್ತು ವರ್ಷದ ಸರಾಸರಿಯಲ್ಲಿ ಐದಾರು ವರ್ಷ ಉತ್ತಮ ಮಳೆಯಾಗುತ್ತದೆ. ಉಳಿದ ಮೂರು ನಾಲ್ಕು ವರ್ಷಗಳು ಈ ರೀತಿಯ ಬರ ಪರಿಸ್ಥಿತಿಯನ್ನು ಎದುರಿಸುತ್ತೇವೆ. ಈ ಹಿಂದಿನ ಅನುಭವಗಳು ಮತ್ತು ತಮಿಳುನಾಡಿನ ರೈತರ ಒತ್ತಡವನ್ನು ಈಗಾಗಲೇ ಗಮನಿಸಿದ್ದೇವೆ. ಮಳೆಯಾದ ಅವಧಿಯಲ್ಲಿ ನಾವು ಕೆರೆಗಳನ್ನು ತುಂಬಿಸುವುದನ್ನು ಮಾಡಬೇಕಾಗಿತ್ತು. ಇಂಥ ಕಾರ್ಯಕ್ರಮಗಳನ್ನು ಸರಕಾರ ರೂಪಿಸಬೇಕು ಎಂದು ಕೇಂದ್ರ ಸಚಿವರು ಸಲಹೆ ಮಾಡಿದರು.

ಮುನ್ನೆಚ್ಚರಿಕೆ ಮತ್ತು ಕಾನೂನು ಮಾರ್ಗದಲ್ಲಿ ಹೋರಾಟಕ್ಕೆ ಕರೆ

ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ವಾಸ್ತವವಾಗಿ ನೋಡುವುದಾದರೆ ಹಲವು ವರ್ಷಗಳಿಂದ ನಮ್ಮ ರಾಜ್ಯಕ್ಕೆ ನೀರಿನ ವಿಷಯದಲ್ಲಿ ಅನ್ಯಾಯವಾಗಿದೆ. ಕೇವಲ ಟೀಕೆ ಪ್ರತಿ ಟೀಕೆಗೆ ಆಸ್ಪದ ಕೊಡದೆ ಮುನ್ನೆಚ್ಚರಿಕೆಯಿಂದ ನೀರಿನ ಬಳಕೆಗೆ ಆದ್ಯತೆ ಕೊಡಬೇಕು. ನಮ್ಮ ರೈತರು ನಮ್ಮ ನಾಡಿನ ಜನತೆಗೆ ಅನಾನುಕೂಲ ಆಗದ ರೀತಿಯಲ್ಲಿ ಕ್ರಮ ವಹಿಸಬೇಕು. ಕಾನೂನು ಪರಿಧಿ ಒಳಗಡೆ ನಾವು ಯಾವ ಕ್ರಮ ವಹಿಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular