“ಹೆಣ್ಣುಮಗಳು ಡ್ರೈವಿಂಗ್ ಕಲಿತರೆ ನಾಳೆ ಆಕೆಯನ್ನ ಮದುವೆ ಆಗುವವರು ಯಾರು?”ಸಮಾಜ ಕೇಳಿದ ಈ ಚುಚ್ಚುಮಾತಿಗೆ ಆಕೆ ಕಿವಿಗೊಡಲಿಲ್ಲ. ಏಕೆಂದರೆ, ಆಕೆ ರಸ್ತೆಗಿಳಿದಿದ್ದು ಯಾರಿಗೂ ಏನನ್ನೂ ಸಾಬೀತು ಮಾಡಲು ಅಲ್ಲ ಬದಲಿಗೆ ಸಂಕಷ್ಟದಲ್ಲಿದ್ದ ತನ್ನ ಕುಟುಂಬಕ್ಕೆ ಆಸರೆಯಾಗಲು
ಅದು ಕೊರೊನಾ ಮಹಾಮಾರಿ ದೇಶವನ್ನೇ ಆವರಿಸಿದ್ದ ಸಮಯ. ಶಾಲಾ-ಕಾಲೇಜುಗಳು ಸಂಪೂರ್ಣ ಬಂದ್ ಆಗಿದ್ದವು. ಇದ್ದಕ್ಕಿದ್ದಂತೆ ಆಕೆಯ ತಂದೆ ತಮ್ಮ ಉದ್ಯೋಗವನ್ನು ಕಳೆದುಕೊಂಡರು. ಕುಟುಂಬಕ್ಕೆ ಬರುವ ಏಕೈಕ ಆದಾಯದ ಮೂಲವೂ ಸಂಪೂರ್ಣವಾಗಿ ನಿಂತುಹೋಯಿತು. ದುರಾದೃಷ್ಟವಶಾತ್ ಅದೇ ಸಮಯದಲ್ಲಿ ತಂದೆಯ ಕೈ ಮೂಳೆ ಮುರಿಯಿತು. ಇಡೀ ಕುಟುಂಬವನ್ನು ಸಾಕಿ ಸಲಹುವ ಬೃಹತ್ ಜವಾಬ್ದಾರಿ ಹಠಾತ್ತನೆ ಆಕೆ ಹಾಗೂ ಆಕೆಯ ಒಡಹುಟ್ಟಿದವರ ಹೆಗಲೇರಿತು.
ಅಂತಹ ಕಠಿಣ ಹಾಗೂ ಅನಿಶ್ಚಿತತೆಯ ದಿನಗಳಲ್ಲಿ ಹೊಸ ಕೆಲಸ ಹುಡುಕುವುದು ಸುಲಭವಾಗಿರಲಿಲ್ಲ. ಆದರೆ, ಮನೆಯಲ್ಲೊಂದು ಹಳೆಯ ಆಟೋರಿಕ್ಷಾ ನಿಂತಿತ್ತು. ಆಕೆ ಧೈರ್ಯಗೆಡಲಿಲ್ಲ. ಸಾಂಪ್ರದಾಯಿಕ ಚೌಕಟ್ಟುಗಳನ್ನು ಬದಿಗೊತ್ತಿ, ಆಟೋದ ಕೀಲಿ ಕೈ ಹಿಡಿದು ರಸ್ತೆಗಿಳಿದಳು. ಕುಟುಂಬದ ಕತ್ತಲಿಗೆ ತಾನೇ ಬೆಳಕಾದಳು.
ಪರಿಸ್ಥಿತಿ ತಿಳಿಯಾಗಿ ಶಾಲೆಗಳು ಮತ್ತೆ ಆರಂಭವಾದಾಗ ಆಕೆ ಅಲ್ಲಿಗೇ ನಿಲ್ಲಲಿಲ್ಲ. ಆಟೋದ ಜೊತೆಗೆ ತಂದೆಯ ಶಾಲಾ ಬಸ್‌ನ ಸ್ಟೀರಿಂಗ್ ಸಹ ಹಿಡಿದಳು. ಆದರೆ, ಪ್ರಯಾಣಿಕರ ಜೊತೆಗೆ ಆಕೆಗೆ ಸಮಾಜದ ಕುಚೋದ್ಯ ಮತ್ತು ನಿರ್ದಯಿ ಟೀಕೆಗಳನ್ನೂ ಹೊತ್ತು ಸಾಗಬೇಕಾಯಿತು.
“ಡ್ರೈವಿಂಗ್ ಮಾಡುವುದು ಹೆಣ್ಣುಮಕ್ಕಳ ಕೆಲಸವಲ್ಲ “ಈಕೆಯನ್ನು ಮದುವೆ ಆಗುವವನು ಯಾರು?””ಮಗಳಿಗೆ ಇಂತಹ ಕೆಲಸ ಮಾಡಲು ಹೇಗೆ ಬಿಡುತ್ತೀಯಾ?” ಎಂದು ಹಲವರು ಆಕೆಯ ತಂದೆಯನ್ನು ಪ್ರಶ್ನಿಸಿದರು.ಆದರೆ, ತಂದೆ ಎಂದಿಗೂ ಮಗಳ ರೆಕ್ಕೆಗಳನ್ನು ಕತ್ತರಿಸಲಿಲ್ಲ. ಇಡೀ ಜಗತ್ತು ಆಕೆಯ ಸಾಮರ್ಥ್ಯವನ್ನು ಶಂಕಿಸಿದಾಗ, ಆಕೆಯ ಬೆನ್ನಿಗೆ ಬಂಡೆಯಂತೆ ನಿಂತಿದ್ದು ಇದೇ ತಂದೆ.
ಇಂದು ಆಕೆ ಬೆಳಿಗ್ಗೆ ಶಾಲಾ ಬಸ್ ಚಾಲಕಿಯಾಗಿ, ಸಂಜೆ ಆಟೋರಿಕ್ಷಾ ಚಾಲಕಿಯಾಗಿ ಸಾಗುತ್ತಾ ತಾಯ್ನಾಡಿನ ಹೆಮ್ಮೆಯಾಗಿದ್ದಾಳೆ. ಅಷ್ಟೇ ಅಲ್ಲ, ಧೈರ್ಯ ಮತ್ತು ಸಾಹಸಕ್ಕೆ ಯಾವುದೇ ಲಿಂಗಭೇದವಿಲ್ಲ ಎಂಬುದನ್ನು ಸಾಬೀತುಪಡಿಸಲು ತನ್ನ ಕಷ್ಟ-ಸುಖದ ಪಯಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಸಾವಿರಾರು ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಿದ್ದಾಳೆ.

