ಬೆಂಗಳೂರು: ಬಿಎಂಟಿಸಿ (BMTC) ಬಸ್ ನಲ್ಲಿ ಮಹಿಳೆಯೊಂದಿಗೆ ಬಸ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪದ ಮೇಲೆ ಹೆಡ್ ಕಾನ್‌ಸ್ಟೇಬಲ್‌ಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಗಂಗಮ್ಮನ ಗುಡಿಯ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ. ಜಾಲಹಳ್ಳಿಗೆ ಬಸ್ ಹತ್ತಿದ ಮಂಜುನಾಥ್ ಮೇಲೆ ಹಲ್ಲೆ ನಡೆಸಲಾಗಿದೆ. ಮಂಜುನಾಥ್ ಅವರ ಬಟ್ಟೆ ಹರಿದು ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ.
ಮಾಹಿತಿಯ ಪ್ರಕಾರ, ಸಂಜಯ ನಗರ ಠಾಣೆಯ ಕಾನ್‌ಸ್ಟೇಬಲ್ ಮಂಜುನಾಥ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕೂಡಲೇ ಮಹಿಳೆ ತನ್ನ ಸಂಬಂಧಿಕರನ್ನು ಕರೆಸಿಕೊಂಡು ಮಂಜುನಾಥ್ ಅವರನ್ನು ಬಸ್ ನಿಂದ ಕೆಳಗಿಳಿಸಿ ಹಲ್ಲೆ ನಡೆಸಿದ್ದಾರೆ. ನಾನು ಪೊಲೀಸ್ ಬಿಡಿ ಎಂದು ಕೇಳಿಕೊಂಡರೂ ಮಂಜುನಾಥ್ ಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ವೈರಲ್ ಆಗಿರುವ ವಿಡಿಯೊ ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪ ಸಾಬೀತಾದರೆ ಕಾನ್‌ಸ್ಟೇಬಲ್ ವಿರುದ್ಧ ಇಲಾಖಾ ಕ್ರಮದ ಜೊತೆಗೆ ಕಾನೂನು ಕ್ರಮವೂ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

