ಹಣ ಸಿಗುತ್ತದೆ ಎಂದರೆ ಸಾಕು, ಯೋಚಿಸದೇ ನಂಬುವ ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ವಂಚಿಸುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಅಂತಹದ್ದೇ ಒಂದು ವಿಚಿತ್ರ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ತೆಲುಗಿನ ‘ವಿಕ್ರಮಾರ್ಕ’ ಸಿನಿಮಾದಲ್ಲಿ ನಟ ರವಿತೇಜ ಸ್ವಾಮೀಜಿಯ ವೇಷದಲ್ಲಿ ಮಹಿಳೆಯರಿಗೆ ತಲೆ ಬೋಳಿಸುವ ದೃಶ್ಯವನ್ನು ನೆನಪಿಸುವ ರೀತಿಯಲ್ಲಿ ಈ ಘಟನೆ ನಡೆದಿದೆ.
ಸೇಲಂ ಜಿಲ್ಲೆಯ ಪುದುಕೊತ್ತಂಬಾಡಿ ಗ್ರಾಮದ ಪಳನಿಯಮ್ಮಾಳ್ ಎಂಬ ಮಹಿಳೆಗೆ ಸೋಮವಾರ ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಜಿಲ್ಲಾ ತಹಶೀಲ್ದಾರ್ ಕಚೇರಿಯ ಹಿರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಕೊರೊನಾ ಮಾದರಿಯ ಹೊಸ ವೈರಸ್ ವೇಗವಾಗಿ ಹರಡುತ್ತಿದ್ದು, ವಿದೇಶಗಳಲ್ಲಿ ಮಹಿಳೆಯರು ತಲೆ ಬೋಳಿಸಿಕೊಂಡ ಕಾರಣವೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸುಳ್ಳು ಹೇಳಿ ಭಯ ಹುಟ್ಟಿಸಿದ್ದಾನೆ.
ಇದೇ ಕ್ರಮವನ್ನು ತಮಿಳುನಾಡು ಸರ್ಕಾರವೂ ಜಾರಿಗೆ ತಂದಿದ್ದು, ತಲೆ ಬೋಳಿಸಿಕೊಂಡ ಪ್ರತಿಯೊಬ್ಬ ಮಹಿಳೆಗೆ ₹15,000, ವಿದ್ಯಾರ್ಥಿನಿಯರಿಗೆ ₹45,000 ಹಾಗೂ ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು ಎಂದು ನಂಬಿಸಿದ್ದಾನೆ. ಪುರುಷರಿಗೆ ₹6,000 ನೀಡಲಾಗುತ್ತದೆ ಮತ್ತು ಈ ಯೋಜನೆ ಮುಖ್ಯಮಂತ್ರಿ ಆದೇಶದ ಮೇರೆಗೆ ನಡೆಯುತ್ತಿದೆ ಎಂದು ಹೇಳಿದ್ದಾನೆ. ಕೇವಲ 18 ಮಂದಿಗೆ ಮಾತ್ರ ಟೋಕನ್ ನೀಡಲಾಗಿದ್ದು, ಆ ಪಟ್ಟಿಯಲ್ಲಿ ಪಳನಿಯಮ್ಮಾಳ್ ಅವರ ಹೆಸರೂ ಇದೆ ಎಂದು ಹೇಳಿ ಆಕೆಯನ್ನು ಸಂಪೂರ್ಣವಾಗಿ ನಂಬಿಸಿದ್ದಾನೆ.
ಈ ವಿಷಯವನ್ನು ಪಳನಿಯಮ್ಮಾಳ್ ತಮ್ಮ ಸುತ್ತಮುತ್ತಲಿನ ಮಹಿಳೆಯರಿಗೆ ತಿಳಿಸಿದ್ದಾಳೆ. ಸರ್ಕಾರದಿಂದ ಹಣ ಸಿಗುತ್ತದೆ ಎಂಬ ಆಸೆಯಿಂದ ಹಲವರು ತಕ್ಷಣ ಕ್ಷೌರಿಕನನ್ನು ಕರೆಸಿ ತಲೆ ಬೋಳಿಸಿಕೊಳ್ಳಲು ಮುಂದಾಗಿದ್ದಾರೆ. ಮೊದಲಿಗೆ ಕಾವೇರಿ, ರಾಮಾಯಿ ಮತ್ತು ಚಿತ್ರಾ ಎಂಬ ಮಹಿಳೆಯರು ಉತ್ಸಾಹದಿಂದ ತಲೆ ಬೋಳಿಸಿಕೊಂಡಿದ್ದಾರೆ. ಇನ್ನೂ ಕೆಲವರು ಕೂಡ ಅದೇ ಮಾಡಲು ಸಿದ್ಧರಾಗಿದ್ದರು.
ಆದರೆ ಹಣ ಯಾವಾಗ ಬರುತ್ತದೆ ಎಂದು ತಿಳಿಯಲು ಪಳನಿಯಮ್ಮಾಳ್ ಮತ್ತೆ ಆ ವ್ಯಕ್ತಿಗೆ ಕರೆ ಮಾಡಿದಾಗ, ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹಲವು ಬಾರಿ ಪ್ರಯತ್ನಿಸಿದರೂ ಸಂಪರ್ಕವಾಗದ ಕಾರಣ ಅನುಮಾನ ಮೂಡಿದ್ದು, ತಕ್ಷಣವೇ ಉಳಿದ ಮಹಿಳೆಯರ ತಲೆ ಬೋಳಿಸುವುದನ್ನು ನಿಲ್ಲಿಸಲಾಯಿತು.
ನಂತರ ವಿಚಾರಿಸಿದಾಗ ಇದು ದುಷ್ಕರ್ಮಿಯೊಬ್ಬ ನಡೆಸಿದ ವಂಚನೆ ಎಂಬುದು ಬೆಳಕಿಗೆ ಬಂದಿದೆ. ಈ ವಿಚಿತ್ರ ಘಟನೆ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರ, ಬ್ಯಾಂಕ್ ಅಥವಾ ಇತರ ಸಂಸ್ಥೆಗಳ ಹೆಸರಿನಲ್ಲಿ ಕರೆ ಮಾಡಿ ಹಣ ಅಥವಾ ಉಡುಗೊರೆ ನೀಡುವುದಾಗಿ ಹೇಳುವ ಅಪರಿಚಿತರ ಮಾತನ್ನು ನಂಬಬಾರದು. ಯಾವುದೇ ಯೋಜನೆ ಬಗ್ಗೆ ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

