ಮೈಸೂರು: ಸ್ವಾಮಿ ವಿವೇಕಾನಂದರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಶ್ರೀರಾಮಕೃಷ್ಣ ಆಶ್ರಮ ವಿವೇಕ ಸ್ಮಾರಕ ಹೆಸರಿನಲ್ಲಿ ನಿರ್ಮಾಣ ಮಾಡಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ಪ್ರಧಾನಿ ಮೋದಿ ಆಗಸ್ಟ್ 1ರಂದು ಉದ್ಘಾಟಿಸಲಿದ್ದಾರೆ.
ಆ. 1 ರಂದು ಮಧ್ಯಾಹ್ನ 3:30ಕ್ಕೆ ಸ್ಮಾರಕಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಸ್ಮಾರಕ ಲೋಕಾರ್ಪಣೆಗೊಳಿಸಿ ಬಿಲ್ವ ಸಸಿ ನೆಡಲಿದ್ದಾರೆ. ನಂತರ ವಿವೇಕಾನಂದರು ತಂಗಿದ್ದ ಕೊಠಡಿಯನ್ನು ವೀಕ್ಷಿಸಲಿದ್ದು, ವಿವಿಧ ಛಾಯಾಚಿತ್ರಗಳು, ಪತ್ರಗಳ ಪ್ರದರ್ಶನ ವೀಕ್ಷಿಸುವರು. ಸ್ಮಾರಕ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸುವರು.
ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಮುಕ್ತಿದಾನಂದ ಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ ಅವರಿಗೆ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿರುವ ವಿವೇಕಾನಂದರ ಪ್ರತಿಮೆಯನ್ನು ಒಳಗೊಂಡ ಸ್ಮರಣಿಕೆ, ಮೈಸೂರಿನ ಸಾಂಪ್ರದಾಯಿಕ ವಸ್ತುಗಳನ್ನು ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಕೆ. ಹರೀಶ್ ಗೌಡ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

