ನವದೆಹಲಿ: ನೂತನ ಕೇಂದ್ರ ಶಿಕ್ಷಣ ಸಚಿವರಾಗಿ ನೇಮಕಗೊಂಡಿರುವ ಪ್ರಲ್ಹಾದ್ ಜೋಶಿ ವಿರುದ್ಧ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಲ್ಹಾದ್ ಜೋಶಿ ಅವರನ್ನು “ಅತ್ಯಂತ ಕೆಟ್ಟ ರೀತಿಯ ವ್ಯಕ್ತಿ” ಎಂದು ಕರೆದಿರುವ ರಾಹುಲ್ ಗಾಂಧಿ, “ಅವರು ಅತ್ಯಾಚಾರಿಗಳನ್ನು ರಕ್ಷಿಸುತ್ತಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪೇಪರ್ ಲೀಕ್ ತಡೆ ಮಸೂದೆ ಕುರಿತ 10 ಗಂಟೆಗಳ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಲ್ಹಾದ್ ಜೋಶಿ ಅವರನ್ನು ಶಿಕ್ಷಣ ಸಚಿವರನ್ನಾಗಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿದರು.”ಶಿಕ್ಷಣ ವ್ಯವಸ್ಥೆ ವಿರುದ್ಧ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ, ಅವರ ಮೇಲೆ ಹಲ್ಲೆಯಾಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಅತ್ಯಾಚಾರಿಗಳನ್ನು ಬೆಂಬಲಿಸುವ ವ್ಯಕ್ತಿಯನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದೆ. ಅತ್ಯಾಚಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳುವ ವ್ಯಕ್ತಿಗಿಂತ ಕೆಟ್ಟವರು ಯಾರೂ ಇರಲು ಸಾಧ್ಯವಿಲ್ಲ. ಅವರು ಭಾರತದ ಶಿಕ್ಷಣ ಸಚಿವರಾಗಿದ್ದಾರೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಹಲವು ಸಚಿವರಿದ್ದರೂ ಪ್ರಲ್ಹಾದ್ ಜೋಶಿ ಅವರನ್ನೇ ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ ಎಂದು ರಾಹುಲ್ ಗಾಂಧಿ ಹೇಳಿದರು.ರಾಹುಲ್ ಗಾಂಧಿ ಅವರ ಈ ಹೇಳಿಕೆಗಳು 2022ರಲ್ಲಿ ಗುಜರಾತ್ ಸರ್ಕಾರವು ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ನೀಡಿದ್ದ ಶಿಕ್ಷೆ ವಿನಾಯಿತಿ ಕುರಿತು ಪ್ರಲ್ಹಾದ್ ಜೋಶಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿವೆ. ಆಗ ಜೋಶಿ, ಕಾನೂನು ಮತ್ತು ರಾಜ್ಯದ ನೀತಿಯ ಪ್ರಕಾರವೇ ಶಿಕ್ಷೆ ವಿನಾಯಿತಿ ನೀಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು. ಬಳಿಕ ಸುಪ್ರೀಂಕೋರ್ಟ್ ಆ ವಿನಾಯಿತಿಯನ್ನು ರದ್ದುಗೊಳಿಸಿ, ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸುವಂತೆ ಆದೇಶಿಸಿತ್ತು.
ರಾಹುಲ್ ಗಾಂಧಿ ಹೇಳಿದ್ದೇನು..?
ಭಾರತದ ಶಿಕ್ಷಣ ಸಚಿವರಾಗಿ ಬಿಜೆಪಿ ಅತ್ಯಾಚಾರಿಗಳನ್ನು ರಕ್ಷಿಸುವ ವ್ಯಕ್ತಿಯನ್ನು ನೇಮಕ ಮಾಡಿದೆ. ಇದು ಅತ್ಯಂತ ಕೀಳು ಮಟ್ಟದ ವ್ಯಕ್ತಿತ್ವ. ಅತ್ಯಾಚಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳುವ ವ್ಯಕ್ತಿಗಿಂತ ಕೀಳು ವ್ಯಕ್ತಿ ಬೇರೆ ಯಾರೂ ಇರಲು ಸಾಧ್ಯವಿಲ್ಲ. ಅಂತಹ ವ್ಯಕ್ತಿಯೇ ಇಂದು ಭಾರತದ ಶಿಕ್ಷಣ ಸಚಿವರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ಕೂಡ ವಿಚಿತ್ರವಾಗಿದೆ. ಅವರ ಸಂಪುಟದಲ್ಲಿ ಹಲವು ಸಚಿವರಿದ್ದಾರೆ. ಅವರಲ್ಲಿ ಯಾರನ್ನಾದರೂ ಆಯ್ಕೆ ಮಾಡಬಹುದಿತ್ತು. ಆದರೆ ಅತ್ಯಾಚಾರಿಗಳನ್ನು ರಕ್ಷಿಸುವ ವ್ಯಕ್ತಿಯನ್ನೇ ಅವರು ಆಯ್ಕೆ ಮಾಡಿದ್ದಾರೆ. ಇದು ನಿಜಕ್ಕೂ ಆಶ್ಚರ್ಯಕರವಾಗಿದೆ” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೂಡ ಇದೇ ರೀತಿಯ ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಜೋಶಿ, “ಪ್ರಿಯಾಂಕಾ ಅವರು ತಮ್ಮ ಹೇಳಿಕೆಗಳನ್ನು ಪರಿಶೀಲಿಸಿಕೊಳ್ಳಬೇಕಿತ್ತು. ತಪ್ಪು ಮಾಹಿತಿ ಹರಡುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾರಾದರೂ ಏನು ಬೇಕಾದರೂ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ. ಅವರು ಕ್ಷಮೆ ಕೇಳಬೇಕು” ಎಂದು ಲೋಕಸಭೆಯಲ್ಲಿ ಹೇಳಿದರು.
ಪೇಪರ್ ಲೀಕ್ ತಡೆ ಮಸೂದೆ ಚರ್ಚೆ
ಒಂದು ವಾರದ ಗದ್ದಲದ ಬಳಿಕ ಮಂಗಳವಾರ ಲೋಕಸಭೆಯಲ್ಲಿ ಪೇಪರ್ ಲೀಕ್ ತಡೆ ಮಸೂದೆ ಕುರಿತು ಚರ್ಚೆ ಆರಂಭವಾಯಿತು. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಕರ ಹಿತಾಸಕ್ತಿ ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.ಸಾರ್ವಜನಿಕ ಪರೀಕ್ಷೆ (ಅಕ್ರಮ ವಿಧಾನಗಳ ತಡೆ) ತಿದ್ದುಪಡಿ ಮಸೂದೆ, 2026 ಕುರಿತು ಮಾತನಾಡಿದ ಜಿತೇಂದ್ರ ಸಿಂಗ್, ಪರೀಕ್ಷಾ ಅಕ್ರಮಗಳನ್ನು ತಡೆಯಲು 2024ರಲ್ಲಿ ಕಾನೂನು ಜಾರಿಗೆ ತರುವ ಮೂಲಕ ಮೋದಿ ಸರ್ಕಾರ ಮಹತ್ವದ ಕೆಲಸ ಮಾಡಿದೆ ಎಂದು ಹೇಳಿದರು.
NEET ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ನಡೆದ ಭಾರೀ ವಿದ್ಯಾರ್ಥಿ ಪ್ರತಿಭಟನೆಗಳ ಬಳಿಕ ಧರ್ಮೇಂದ್ರ ಪ್ರಧಾನ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ಪ್ರಲ್ಹಾದ್ ಜೋಶಿ ಅವರಿಗೆ ನೀಡಲಾಗಿತ್ತು.
WATCH VIDEO

