HomeLatest Newsಫುಟ್‌ಪಾತ್‌ನಲ್ಲಿರುವ ಬೆಸ್ಕಾಂ ಅಡೆತಡೆಗಳ ಪಟ್ಟಿಯನ್ನೂ ಸಿದ್ಧಪಡಿಸಿ; ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ಕೃಷ್ಣಬೈರೇಗೌಡ

ಫುಟ್‌ಪಾತ್‌ನಲ್ಲಿರುವ ಬೆಸ್ಕಾಂ ಅಡೆತಡೆಗಳ ಪಟ್ಟಿಯನ್ನೂ ಸಿದ್ಧಪಡಿಸಿ; ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ಕೃಷ್ಣಬೈರೇಗೌಡ

ಬೆಂಗಳೂರು-ಜಿಬಿಎ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿರುವ ಬೆಸ್ಕಾಂಗೆ ಸಂಬಂಧಿಸಿದ ಎಲ್ಲ ಅಡೆತಡೆಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿ, ಆಗಸ್ಟ್ 1ರಿಂದ ಪ್ರಾರಂಭವಾಗುವ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದಲ್ಲಿ ತೆರವು ಕಾರ್ಯಾಚರಣೆಯನ್ನು ಆರಂಭಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಪಾದಚಾರಿ ಮಾರ್ಗಗಳಲ್ಲಿರುವ ಬೆಸ್ಕಾಂ ಅಡೆತಡೆಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಆಗಸ್ಟ್ 1ರಿಂದ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನದಡಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೃಹತ್ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂಗೆ ಸಂಬಂಧಿಸಿದ ಅಡೆತಡೆಗಳನ್ನು ಇದೇ ಅವಧಿಯಲ್ಲಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಪಾಯಕಾರಿ ಅಡೆತಡೆಗಳ ತೆರವಿಗೆ ಅಲ್ಪ ಮತ್ತು ದೀರ್ಘಾವಧಿ ಯೋಜನೆ

ನಗರದಾದ್ಯಂತ ಬಳಕೆಯಲ್ಲಿಲ್ಲದ, ಹಳೆಯ, ಹಾಗೂ ಮುರಿದ ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳಿಗೆ ಅಳವಡಿಸಿರುವ ರಾಡ್‌ಗಳು ನಾಗರಿಕರ ತಲೆಗೆ ತಾಗುವ ರೀತಿಯಲ್ಲಿವೆ. ಇಂತಹ ಅಪಾಯಕಾರಿ ಅಡೆತಡೆಗಳನ್ನು ಕೂಡಲೇ ತೆರವುಗೊಳಿಸಬೇಕು. ಅಲ್ಲದೆ, ಪಾದಚಾರಿ ಮಾರ್ಗಗಳಲ್ಲಿ ಅಡ್ಡಿಯಾಗಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಈ ಸಂಬಂಧ ಅಲ್ಪಾವಧಿ(Short-term) ಹಾಗೂ ದೀರ್ಘಾವಧಿ(Long-term) ಯೋಜನೆಗಳನ್ನು ರೂಪಿಸಿ, ಬೆಸ್ಕಾಂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ನಿರ್ದೇಶನ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾದಚಾರಿ ಮಾರ್ಗಗಳ ಮಧ್ಯಭಾಗದಲ್ಲಿರುವ ವಿದ್ಯುತ್ ಕಂಬಗಳನ್ನು ಬಳಸಿಕೊಂಡು ಕೆಲವರು ಸಂಪೂರ್ಣ ಮಾರ್ಗವನ್ನು ಅತಿಕ್ರಮಿಸಿರುವ ಪ್ರಕರಣಗಳೂ ಕಂಡುಬರುತ್ತಿವೆ. ಅದಲ್ಲದೆ ಖಾಸಗಿ ಅಪಾರ್ಟ್ಮೆಂಟ್ ಗಳು ಅಳವಡಿಸಿಕೊಂಡಿರುವ ಟ್ರಾನ್ಸ್‌ಫಾರ್ಮರ್‌ಗಳು ಪಾದಚಾರಿ ಮಾರ್ಗ/ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದು, ಅಂತಹವುಗಳನ್ನು ಪಟ್ಟಿ ಮಾಡಿಕೊಂಡಿ ಅವರ ಜಾಗದಲ್ಲಿಯೇ ಅಳವಡಿಸಿಕೊಳ್ಳಲು ಸೂಚನೆ ನೀಡಬೇಕು. ಬೆಸ್ಕಾಂನ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಬೆಸ್ಕಾಂ ವಿಶೇಷ ಅಭಿಯಾನ ಹಮ್ಮಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಪ್ರಸ್ತುತ ನಗರದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬೆಸ್ಕಾಂಗೆ ಸಂಬಂಧಿಸಿದ ಎಲ್ಲ ಅಡೆತಡೆಗಳ ಪಟ್ಟಿಯನ್ನು ಸಿದ್ಧಪಡಿಸಿ, ಮೊದಲ ಹಂತದಲ್ಲಿಯೇ ಅವುಗಳನ್ನು ಸಂಪೂರ್ಣ ತೆರವುಗೊಳಿಸಿ ಸುಗಮ ಹಾಗೂ ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವಂತೆ ಸೂಚಿಸಿದರು.

ಬಳಕೆಯಲ್ಲಿಲ್ಲದ ವಿದ್ಯುತ್ ಕಂಬಗಳನ್ನು ಕೂಡಲೇ ತೆರವುಗೊಳಿಸಬೇಕು. ಅವುಗಳ ಸುತ್ತಮುತ್ತ ಸಂಗ್ರಹವಾಗಿರುವ ತ್ಯಾಜ್ಯವನ್ನೂ ಸ್ವಚ್ಛಗೊಳಿಸಬೇಕು. ಸಿದ್ಧಪಡಿಸಿದ ಪಟ್ಟಿಯ ಅನುಸಾರ ನಿಗದಿತ ಅವಧಿಯೊಳಗೆ ಎಲ್ಲ ಅಡೆತಡೆಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಟ್ರಾನ್ಸ್‌ಫಾರ್ಮರ್ ವಿನ್ಯಾಸದಲ್ಲಿ ಏಕರೂಪತೆಗೆ ನಿರ್ದೇಶನ

ಪಾದಚಾರಿ ಮಾರ್ಗಗಳಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳು ನಾಗರಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ವಿನ್ಯಾಸಗೊಳಿಸಬೇಕು. ಟ್ರಾನ್ಸ್‌ಫಾರ್ಮರ್‌ಗಳಿಗೆ ಅಳವಡಿಸಿರುವ ರಾಡ್‌ಗಳು ಸಾರ್ವಜನಿಕರ ತಲೆಗೆ ತಾಗದಂತೆ ಅವುಗಳ ಎತ್ತರವನ್ನು ಕನಿಷ್ಠ 7 ಅಡಿಗಳಷ್ಟು ಇರಿಸಬೇಕು. ಪಾದಚಾರಿ ಮಾರ್ಗಗಳನ್ನು ಸುರಕ್ಷಿತ ವಲಯವೆಂದು ಪರಿಗಣಿಸಿ, ನಗರದಾದ್ಯಂತ ಒಂದೇ ಮಾದರಿಯ ವಿನ್ಯಾಸವನ್ನು ರೂಪಿಸಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಧಿಕಾರಿಗಳ ಪ್ರತಿಕ್ರಿಯೆ ಮತ್ತು ಮುಂದಿನ ಕ್ರಮಗಳು

*ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್* ಅವರು ಮಾತನಾಡಿ, ಪಾದಚಾರಿ ಮಾರ್ಗಗಳಲ್ಲಿರುವ ಹಳೆಯ ಟ್ರಾನ್ಸ್‌ಫಾರ್ಮರ್‌ಗಳ ಸುತ್ತ ಅಳವಡಿಸಿರುವ ಫೆನ್ಸಿಂಗ್‌ನಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ, ಫೆನ್ಸಿಂಗ್ ಒಳಭಾಗದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿರುವುದು ಕಂಡುಬಂದಿದ್ದು, ಅದನ್ನು ತೆರವುಗೊಳಿಸಬೇಕು. ಹಳೆಯ ಟ್ರಾನ್ಸ್‌ಫಾರ್ಮರ್‌ಗಳನ್ನು ಸಿಂಗಲ್ ಪೋಲ್ ಟ್ರಾನ್ಸ್‌ಫಾರ್ಮರ್‌ಗಳಾಗಿ ಪರಿವರ್ತಿಸುವುದರ ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಸ್ಥಳಾಂತರಿಸುವಂತೆ ಸೂಚನೆ ನೀಡಿದರು.

*ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ್* ಅವರು ಮಾತನಾಡಿ, ನಗರದಲ್ಲಿ ಪಾದಚಾರಿ ಮಾರ್ಗಗಳಲ್ಲಿದ್ದ ಸುಮಾರು 7,000 ಹಳೆಯ ಟ್ರಾನ್ಸ್‌ಫಾರ್ಮರ್‌ಗಳನ್ನು ಈಗಾಗಲೇ ಬದಲಿಸಲಾಗಿದೆ. ಇನ್ನೂ ಎಲ್ಲೆಲ್ಲಿ ಹಳೆಯ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಅಡೆತಡೆಗಳಿವೆಯೋ ಅವುಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದೇ ಮಾದರಿಯ ವಿನ್ಯಾಸವನ್ನು ರೂಪಿಸಿ ವಿಶೇಷ ಅಭಿಯಾನದ ಮೂಲಕ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್, ರಾಜೇಂದ್ರ ಕೆ.ವಿ., ಅಪರ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular