ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಯ ವೇಳೆ ಬಂಧನಕ್ಕೀಡಾಗಿದ್ದ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ನೀಟ್ ಅಕ್ರಮ ಖಂಡಿಸಿ ದೆಹಲಿಯ ಜಂತರ್ ಮಂತರ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿದ್ದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕ್ರಿಮಿನಲ್ ದಾಖಲೆಗಳಿಲ್ಲದವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.
ಕಾಕ್ರೋಚ್ ಜನತಾ ಪಾರ್ಟಿ ಹಾಗೂ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಆದೇಶ ಹೊರದಿಸಿದೆ.
ಪ್ರತಿಭಟನೆಗಳ ವೇಳೆ ಬಂಧನಕ್ಕೊಳಗಾಗಿರುವ 18 ವರ್ಷದೊಳಗಿನ ಎಲ್ಲಾ ವಿದ್ಯಾರ್ಥಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಸೂಚನೆ ನೀಡಿದೆ.
ಶಾಂತಿಯುತ ಮತ್ತು ಕಾನೂನುಬದ್ಧ ಪ್ರತಿಭಟನೆ ನಡೆಸುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಶಾಂತಿಯುತ ಆಂದೋಲನ ನಡೆಯುತ್ತಿರುವಾಗ ಕೇವಲ ಪ್ರತಿಭಟನೆ ಎಂಬ ಕಾರಣಕ್ಕೆ ಪೊಲೀಸರು ಅತಿಯಾದ ಬಲಪ್ರಯೋಗ ಅಥವಾ ದೌರ್ಜನ್ಯ ಎಸಗಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಬಲಪ್ರಯೋಗ ನಡೆಸಿದ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸದಿದ್ದರೆ ತನಿಖೆಗೆ ಬೆಲೆ ಇರುವುದಿಲ್ಲ. ಹಾಗಾಗಿ ಸ್ವತಂತ್ರ ತನಿಖೆ ನಡೆಸುವುದು ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರತಿಭಟನೆಗಳ ವೇಳೆ ಅಶ್ರುವಾಯು, ವಿದ್ಯುತ್ ಲಾಠಿ, ಪೆಲೆಟ್ ಗನ್ಗಳ ಬಳಕೆಯನ್ನು ನಿಯಂತ್ರಿಸಲು ಹಾಗೂ ಪೊಲೀಸರಿಗೆ ಸೂಕ್ತ ರಕ್ಷಣಾ ಕವಚ ಒದಗಿಸಲು ದೇಶಾದ್ಯಂತ ಹೊಸ ಭದ್ರತಾ ಶಿಷ್ಟಾಚಾರ ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಜುಲೈ 20 ರಿಂದ 25 ರವರೆಗೆ ಜಂತರ್ ಮಂತರ್ ಸೇರಿದಂತೆ ವಿವಿಧೆಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅತಿಯಾದ ಪೊಲೀಸ್ ಬಲಪ್ರಯೋಗ ನಡೆದಿದೆ ಎಂದು ಆರೋಪಿಸಿ ಆರ್ಜೆಡಿ ರಾಜ್ಯಸಭಾ ಸಂಸದ ಪ್ರೊ. ಮನೋಜ್ ಝಾ ಸೇರಿದಂತೆ ಹಲವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪೊಲೀಸ್ ದೌರ್ಜನ್ಯದ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ಹಾಗೂ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು. ಇದಕ್ಕಾಗಿ ಡಿಜಿಪಿ ದರ್ಜೆಯ ಅಧಿಕಾರಿ ಹಾಗೂ ಇಬ್ಬರು ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕೆಂದು ಅರ್ಜಿದಾರರು ಕೋರಿದ್ದರು.

