ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಫಿಟ್ನೆಸ್ ವಿಚಾರದಲ್ಲಿ ವಿಶ್ವದ ಎಲ್ಲಾ ಕ್ರೀಡಾಪಟುಗಳಿಗೂ ಮಾದರಿಯಾಗಿದ್ದಾರೆ. ತಮ್ಮ ಆಹಾರ ಕ್ರಮ, ಜಿಮ್ ಕಸರತ್ತು ಹಾಗೂ ಶಿಸ್ತಿನ ಜೀವನಶೈಲಿಯಿಂದ ಕ್ರಿಕೆಟ್ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿರುವ ಕೊಹ್ಲಿ ಹಾದಿಯನ್ನು ತುಳಿಯುವುದು ಅಷ್ಟು ಸುಲಭವಲ್ಲ. ಇದೀಗ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್, ತಾನು ವಿರಾಟ್ ಕೊಹ್ಲಿ ನೀಡಿದ್ದ ಲೈಫ್‌ಸ್ಟೈಲ್ ಸಲಹೆಯನ್ನು ಕೇವಲ ಒಂದು ವರ್ಷ ಪಾಲಿಸಿ, ನಂತರ ಅದನ್ನು ಮುಂದುವರಿಸಲು ಸಾಧ್ಯವಾಗದೆ ಬಿಟ್ಟುಕೊಟ್ಟ ವಿಷಯವನ್ನು ಬಹಿರಂಗಪಡಿಸಿದ್ದಾರೆ.
‘ಜಿಯೋಸ್ಟಾರ್’ ನ ‘ಬಿಲೀವ್’ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಂಜು ಸ್ಯಾಮ್ಸನ್, ವಿರಾಟ್ ಕೊಹ್ಲಿ ಅವರ ಜಿಮ್ ವರ್ಕೌಟ್ ಮತ್ತು ಫಿಟ್ನೆಸ್ ಮೇಲಿನ ನಿಷ್ಠೆಯನ್ನು ಶ್ಲಾಘಿಸಿದ್ದಾರೆ. “ಭಾರತೀಯ ತಂಡದ ಕ್ಯಾಂಪ್ ಒಂದರಲ್ಲಿ ನಾವಿಬ್ಬರೂ ಜೊತೆಯಾಗಿ ಜಿಮ್ ಮಾಡುತ್ತಿದ್ದಾಗ, ‘ಪಾಜಿ, ನನಗೂ ಒಂದೊಳ್ಳೆ ಸಲಹೆ ನೀಡಿ’ ಎಂದು ಕೊಹ್ಲಿ ಅವರಲ್ಲಿ ಕೇಳಿಕೊಂಡಿದ್ದೆ. ಅದಕ್ಕೆ ಅವರು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುದೀರ್ಘ ಕಾಲ ಯಶಸ್ವಿಯಾಗಿ ಮುಂದುವರಿಯಬೇಕಾದರೆ ಶಿಸ್ತಿನ ಜೀವನಶೈಲಿ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದರು” ಎಂದು ಸಂಜು ನೆನಪಿಸಿಕೊಂಡಿದ್ದಾರೆ.
ಮುಂದುವರಿದು ಮಾತನಾಡಿದ ಸಂಜು, “ಯಾವ ಆಹಾರ ದೇಹಕ್ಕೆ ಸೂಕ್ತ, ಯಾವುದರಿಂದ ದೇಹ ಬೇಗ ಚೇತರಿಸಿಕೊಳ್ಳುತ್ತದೆ ಎಂಬುದನ್ನು ಕೊಹ್ಲಿ ತಿಳಿಸಿಕೊಟ್ಟಿದ್ದರು. ಮುಂದಿನ 10 ವರ್ಷಗಳ ಕಾಲ ಈ ಶಿಸ್ತನ್ನು ಕಾಪಾಡಿಕೊಂಡರೆ ಕ್ರಿಕೆಟ್ ಜೀವನ ಅತ್ಯುತ್ತಮವಾಗಿರುತ್ತದೆ ಎಂದು ಹೇಳಿದ್ದರು. ನಾನು ಅವರ ಮಾತು ಕೇಳಿ ಒಂದೂವರೆಯಿಂದ ಎರಡು ವರ್ಷಗಳ ಕಾಲ ಆ ಜೀವನಶೈಲಿಯನ್ನು ಶ್ರದ್ಧೆಯಿಂದ ಫಾಲೋ ಮಾಡಿದೆ. ಆದರೆ, ಆ ಮಟ್ಟದ ಕಠಿಣ ಶಿಸ್ತನ್ನು ದೀರ್ಘಕಾಲದವರೆಗೆ ಮುಂದುವರಿಸಲು ನನ್ನಿಂದ ಸಾಧ್ಯವಾಗಲಿಲ್ಲ” ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.
ಇದೇ ವೇಳೆ ಮುಂಬರುವ ಟ್ವೆಂಟಿ-20 ವಿಶ್ವಕಪ್ ಹಾಗೂ ರೇಸ್ ಕುರಿತು ಮಾತನಾಡಿದ ಅವರು, ಯಾರೊಂದಿಗೂ ಅನಗತ್ಯ ಸ್ಪರ್ಧೆಗೆ ಬೀಳದೆ ತಮ್ಮದೇ ಶೈಲಿಯಲ್ಲಿ ಆಟವನ್ನು ಆನಂದಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. 2028ರ ಟಿ20 ವಿಶ್ವಕಪ್‌ಗೆ ತಂಡದಲ್ಲಿ ಜಾಗ ಸಿಗಲಿ ಅಥವಾ ಸಿಗದಿರಲಿ, ತಮ್ಮ ಕ್ರಿಕೆಟ್ ಪಯಣದ ಬಗ್ಗೆ ಸದಾ ಕೃತಜ್ಞರಾಗಿರುವುದಾಗಿ ಸಂಜು ಸ್ಯಾಮ್ಸನ್ ಸ್ಪಷ್ಟಪಡಿಸಿದ್ದಾರೆ.

