HomeKarnatakaಅಪಘಾತದಲ್ಲಿ ಮೃತಪಟ್ಟ ಎಎಸ್ಐ ಕುಟುಂಬಕ್ಕೆ 1.08 ಕೋಟಿ ರೂ. ಪರಿಹಾರ ವಿತರಣೆ

ಅಪಘಾತದಲ್ಲಿ ಮೃತಪಟ್ಟ ಎಎಸ್ಐ ಕುಟುಂಬಕ್ಕೆ 1.08 ಕೋಟಿ ರೂ. ಪರಿಹಾರ ವಿತರಣೆ

ಶಿವಮೊಗ್ಗ: ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್‌ ಇಲಾಖೆಯ ಎಲ್ಲಾ ಅಧಿಕಾರಿ-ಸಿಬ್ಬಂಧಿಗಳು ನಿರ್ಲಕ್ಷ್ಯ ತೋರದೆ ತಮ್ಮ ಮತ್ತು ತಮ್ಮ ಅವಲಂಬಿತ ಕುಟುಂಬದ ಕ್ಷೇಮಕ್ಕಾಗಿ ತಾವು ಪಡೆಯುವ ವೇತನದಲ್ಲಿ ಸ್ಯಾಲರಿ ಪ್ಯಾಕೇಜ್‌ ಸ್ಕೀಂ ಮತ್ತು ಜೀವವಿಮೆಗಾಗಿ ಸಣ್ಣ ಮೊತ್ತವನ್ನು ಕಟಾವಣೆ ಮಾಡಿಸಿಕೊಂಡು ಅಸುರಕ್ಷಿತ ಬದುಕಿಗೆ ಸುರಕ್ಷತೆಯ ಕವಚ ಸೃಷ್ಠಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ.ನಿಖಿಲ್‌ ಅವರು ಹೇಳಿದರು.

ಅವರು ಇಂದು ತಮ್ಮಕಚೇರಿ ಸಭಾಂಗಣದಲ್ಲಿ ಕಳೆದ ಎರಡು ತಿಂಗಳ ಹಿಂದೆ ಶಿರಾಳಕೊಪ್ಪ ಸಮೀಪದಲ್ಲಿ ಅಫಘಾತಕ್ಕೀಡಾಗಿ ಮೃತರಾಗಿದ್ದ ಆನವಟ್ಟಿ ಪೊಲೀಸ್‌ ಠಾಣೆಯ ಅಸಿಸ್ಟೆಂಟ್‌ ಸಬ್‌ಇನ್ಸ್‌ಫೆಕ್ಟರ್‌ ಬಸವರಾಜು ಅವರ ಕುಟುಂಬಕ್ಕೆ ಬ್ಯಾಂಕ್‌ ಆಫ್‌ ಬರೋಡದಿಂದ ನೀಡಿದ ಸ್ಯಾಲರಿ ಪ್ಯಾಕೇಜ್‌ ಸ್ಕೀಂನ ಸೌಲಭ್ಯ ಮತ್ತು ವಿಮಾ ಮೊತ್ತ ಸೇರಿದಂತೆ ಒಟ್ಟು ರೂ.1.08ಕೋಟಿ ಮೊತ್ತದ ಚೆಕ್ಕನ್ನು ವಿತರಿಸಿ ಮಾತನಾಡುತ್ತಿದ್ದರು.

ಯಾವುದೇ ನೌಕರರ ಕುಟುಂಬದಲ್ಲೂ ಇಂತಹ ಆಕಸ್ಮಿಕ ಅಹಿತಕರ ಘಟನೆಗಳು ಘಟಿಸಬಾರದು. ಆದರೆ, ಆಕಸ್ಮಿಕ ಅಫಘಾತಗಳಿಂದ ನೌಕರರ ಕುಟುಂಬಕ್ಕೆ ಆಗುವ ನಷ್ಟ ಅಂದಾಜು ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಮನೆಯ ಕುಟುಂಬದ ಪೋಷಕರು, ಪತ್ನಿ ಪುತ್ರರ ಬದುಕಿಗೆ ಆಸರೆ ಯಾರು? ಎನ್ನುವಂತಾಗುತ್ತದೆ. ಇಂತಹ ಸಂದರ್ಭದಲ್ಲಿ ನೌಕರರು ಭವಿಷ್ಯದ ಬದುಕನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೌಕರರಿಗಾಗಿಯೇ ಕಲ್ಪಿಸಿಕೊಟ್ಟಿರುವ ಸ್ಯಾಲರಿ ಪ್ಯಾಕೇಜ್‌ ಮತ್ತು ವಿಮಾ ಸೌಲಭ್ಯಗಳ ಲಾಭ ಪಡೆದುಕೊಳ್ಳಬೇಕು. ಆಗ ನೊಂದ ಕುಟುಂಬಕ್ಕೆ ಅಲ್ಪಮಟ್ಟಿನ ಸಮಾಧಾನ ದೊರೆಯಲಿದೆ ಮಾತ್ರವಲ್ಲ ಮುಂದಿನ ಬದುಕಿಗೆ ಸಂಜೀವಿನಿಯಂತೆ ಆಸರೆ ದೊರೆಯಲಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತ ಅಸಿಸ್ಟೆಂಟ್‌ ಪೊಲೀಸ್‌ ಸಬ್‌ ಇನ್ಸ್‌ ಪೆಕ್ಟರ್‌ ಬಸವರಾಜ ಅವರ ಪುತ್ರಿ, ಆನವಟ್ಟಿ ಯಶಸ್ವಿನಿ ಮಾತನಾಡಿ, ತಂದೆ ಬದುಕಿದ್ದಾಗ ಬದುಕಿನ ಕಷ್ಟನಷ್ಟಗಳು ಅರಿವಿಗೆ ಬರಲಿಲ್ಲ. ಅವರ ಆಕಸ್ಮಿಕ ನಿಧನದ ನಂತರ ಆಕಾಶವೇ ಕಳಚಿ ಬಿದ್ದಾಂತಾಯಿತು. ಮುಂದೇನು ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆ ಕಣ್ಣೆದುರಿಗೆ ಬಂದು ನಿಂತಾಗ ಕಣ್ಣಿಗೆ ಕತ್ತಲು ಆವರಿಸಿದಂತಾಗಿ ದಿಕ್ಕೇ ತೋಚದಂತಾಗಿತ್ತು. ತಂದೆಯವರ ಅಂತ್ಯಕ್ರಿಯೆಯ ಎಲ್ಲಾ ಕಾರ್ಯವಿಧಿಗಳು ಪೂರ್ಣಗೊಂಡು ನಿಧಾನವಾಗಿ ವಾಸ್ತವ ಬದುಕಿಗೆ ತೆರೆದುಕೊಳ್ಳುವಾಗ ಅಪ್ಪನ ಸ್ನೇಹಿತರು, ವೃತ್ತಿ ಬಾಂಧವರು ಸ್ಯಾಲರಿ ಪ್ಯಾಕೇಜ್‌ ಬಗ್ಗೆ ತಿಳಿಸಿದಾಗ ಕಣ್ಣಿಗೆ ಆವರಿಸಿದ್ದ ಅಂಧಕಾರ ಕಳೆದು ಬೆಳಕಿನ ಮಿಂಚುಳ್ಳಿ ಬದುಕಿನ ಹೊಸ ಬಾಗಿಲು ತೆರೆದ ಅನುಭವವಾಯಿತು. ದಿನಕಳೆದಂತೆ ಒಂದು ದಿನ ಪೊಲೀಸ್‌ ಠಾಣೆಯ ಹಿರಿಯ ಅಧಿಕಾರಿಗಳನ್ನು, ಅಪ್ಪ ಖಾತೆ ತೆರೆದಿದ್ದ ಬ್ಯಾಂಕಿನ ಮ್ಯಾನೇಜರರನ್ನು ಮಾತನಾಡಿಸಿದಾಗ ಹೊಸ ಬದುಕು ಪುನರ್‌ ಆರಂಭವಾದಂತೆ ಭಾಸವಾಯಿತು. ಎರಡು ತಿಂಗಳ ಅವಧಿಯಲ್ಲಿ ಸ್ಯಾಲರಿ ಪ್ಯಾಕೇಜ್‌ ಮಾಡಿಸಿದ ಅಪ್ಪ ನಮ್ಮ ಕುಟುಂಬದ ಮುಂದಿನ ಸುಂದರ ಬದುಕಿಗೆ ಆಸರೆಯಾಗಿದ್ದ. ಅಪ್ಪ ಮಾಡಿಸಿದ ಸ್ಯಾಲರಿ ಪ್ಯಾಕೇಜ್‌ ಮತ್ತು ವಿಮೆಯಿಂದಾಗಿ ಒಟ್ಟು 1.08ಕೋಟಿ ರೂ.ಗಳ ಸೌಲಭ್ಯ ದೊರೆತಿದೆ. ಮುಗಿದೇ ಹೋಯಿತೆಂದು ಭಾವಿಸಿದ್ದ ಕುಟುಂಬಕ್ಕೆ ಹೊಸ ದಾರಿ ಸಿಕ್ಕಿದೆ. ಈ ಸೌಲಭ್ಯವನ್ನು ದೊರಕಿಸಿಕೊಡುವಲ್ಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮತ್ತು ಅವರ ತಂಡದವರನ್ನು ಜೀವನ ಪರ್ಯಂತ ಮರೆಯುವುದಿಲ್ಲ. ಅಂತೆಯೇ ಅತ್ಯಲ್ಪ ಅವಧಿಯಲ್ಲಿ ಎಲ್ಲಾ ಸೌಲಭ್ಯವನ್ನು ದೊರಕಿಸಿಕೊಟ್ಟ ಬ್ಯಾಂಕ್‌ ಆಫ್‌ ಬರೋಡಾದ ಅಧಿಕಾರಿ ಸಿಬ್ಬಂಧಿಗಳು ಅಭಿನಂದಾರ್ಹರು ಎಂದರು. ಈ ಮಾತನ್ನು ಹೇಳುವಾಗ ಯಶಸ್ವಿನಿಯ ಕಣ್ಣಾಲಿಗಳು ತುಂಬಿ ಬಂದಿದ್ದವು.

ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ವಿವಿಧ ಬ್ಯಾಂಕ್‌ ಹಾಗೂ ಅಂಚೆ ಕಚೇರಿಗಳಲ್ಲಿ ‘ಸಂಬಳ ಪ್ಯಾಕೇಜ್‌’ ಖಾತೆಗಳನ್ನು ಕಡ್ಡಾಯವಾಗಿ ತೆರೆಯುವುದನ್ನು ಆರ್ಥಿಕ ಇಲಾಖೆಯು ಕಡ್ಡಾಯಗೊಳಿಸಿದೆ. ಈ ಯೋಜನೆಯಡಿ ನೌಕರರು ಶೂನ್ಯ ಬ್ಯಾಲೆನ್ಸ್ ಖಾತೆ, ಅಪಘಾತ ವಿಮಾ ಸೌಲಭ್ಯ ಮತ್ತು ವಿಶೇಷ ಬ್ಯಾಂಕಿಂಗ್ ಸೌಲಭ್ಯಗಳ ಪ್ರಯೋಜನ ಪಡೆಯಬಹುದಾಗಿದೆ. ಕಡಿಮೆ ಪ್ರೀಮಿಯಂನಲ್ಲಿ ವೈಯಕ್ತಿಕ ಅಪಘಾತ ವಿಮೆ ಮತ್ತು ಜೀವವಿಮಾ ಸೌಲಭ್ಯಗಳು, ಸಾಲಗಳ ಮೇಲೆ ರಿಯಾಯಿತಿ ದರ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ದೊರೆಯಲಿವೆ. ನೌಕರರ ಮತ್ತು ಅವರ ಅವಲಂಬಿತ ಕುಟುಂಬದವರ ಹಿತಾಸಕ್ತಿ ಕಾಪಾಡಲು ಹಾಗೂ ಬ್ಯಾಂಕ್‌ಗಳು ನೀಡುವ ವಿಮಾ ಭದ್ರತೆ ಪಡೆಯಲು ಮಾರ್ಚ್ ಮಾಹೆಯಲ್ಲಿ ಆರ್ಥಿಕ ಇಲಾಖೆಯು ಈ ಆದೇಶ ಹೊರಡಿಸಿದೆ. ಅದಕ್ಕಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಹಿತಸುಖ ಕಾಯುವ ನಿಟ್ಟಿನಲ್ಲಿ ಅವಿರತವಾಗಿ ಪ್ರಯತ್ನ ಮಾಡಿತ್ತು. ಈ ಯೋಜನೆಯಿಂದಾಗಿ ಮೃತ ಕುಟುಂಬಕ್ಕೆ ಸಹಾಯಕಾರಿಯಾಗಿದೆ. ಸಂಘದ ಸಂಘಟಿತ ಪ್ರಯತ್ನಕ್ಕೆ ಜಯ ದೊರೆತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌ ಅವರು ಮೃತ ಪೊಲೀಸ್‌ ಸಬ್‌ ಇನ್ಸ್‌ಫೆಕ್ಟರ್‌ ಬಸವರಾಜು ಅವರ ಪತ್ನಿ ರೇಣುಕಾ ಅವರಿಗೆ ಬ್ಯಾಂಕ್‌ ಆಫ್‌ ಬರೋಡಾ ವತಿಯಿಂದ ನೀಡಲಾದ ಸೌಲಭ್ಯದ ಚೆಕ್ ನೀಡಿದರು. ಈ ಸಂದರ್ಭದಲ್ಲಿ ಮೃತ ಪೊಲೀಸ್‌ ಅಧಿಕಾರಿ ಬಸವರಾಜ ಅವರ ಪುತ್ರಿ ಯಶಸ್ವಿನಿ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರಿಯಪ್ಪ, ಬ್ಯಾಂಕ್‌ ಆಫ್‌ ಬರೋಡಾದ ವಿಭಾಗೀಯ ವ್ಯವಸ್ಥಾಪಕ ದೀಪಕ್‌ ಎನ್.ಸಹಕಾರ್‌, ಪ್ರಧಾನ ವ್ಯವಸ್ಥಾಪಕ ಧೀರಜ್‌ ಚೋಪ್ರಾ, ಹಿರಿಯ ವ್ಯವಸ್ಥಾಪಕ ಚಂದ್ರಶೇಖರ್‌ ಜಿ.ಕೆ., ಶಾಖಾ ವ್ಯವಸ್ಥಾಪಕ ಬಷೀರ್‌ ಹುಡೇದ್‌ ಸೇರಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular